ರಾಜ್ಯದಲ್ಲಿ ಕಾಡಾನೆ ಹಾವಳಿ ತಡೆಗೆ ತಮಿಳುನಾಡು ಮಾದರಿ ರೋಪ್ ಫೆನ್ಸ್: ಜಾವೇದ್ ಅಕ್ತರ್

ಹೊಸದಿಗಂತ ವರದಿ, ಮಡಿಕೇರಿ:

ವನ್ಯಜೀವಿ – ಮಾನವ ನಡುವಿನ ಸಂಘರ್ಷ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಗಂಭೀರ ಚಿಂತನೆ ನಡೆಸಿದ್ದು, ತಮಿಳುನಾಡು ಮಾದರಿಯಲ್ಲಿ ಕರ್ನಾಟಕದಲ್ಲಿಯೂ ‘ರೋಪ್ ಫೆನ್ಸ್’ ಅಳವಡಿಕೆಯನ್ನು ಪ್ರಾಯೋಗಿಕವಾಗಿ 5 ಕೋಟಿ ರೂ. ವೆಚ್ಚದಲ್ಲಿ ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗುತ್ತದೆ ಎಂದು ರಾಜ್ಯ ಅರಣ್ಯ, ಜೀವವೈವಿಧ್ಯ ಮತ್ತು ಪರಿಸರ ಇಲಾಖೆಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಜಾವೇದ್ ಅಕ್ತರ್ ಹೇಳಿದರು.
ನಗರದಲ್ಲಿ ಶನಿವಾರ ನಡೆದ ಕೊಡಗು ಕಾಫಿ ಬೆಳೆಗಾರರ ಸಂಘದ 143ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಮುಖವಾಗಿ ಕಾಡಾನೆಗಳು ನಾಡಿಗೆ ಬಾರದಂತೆ ತಡೆಯುವ ನಿಟ್ಟಿನಲ್ಲಿ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಲಾಗಿದ್ದು, ಬಜೆಟ್’ನಲ್ಲಿ ನಿಗದಿಪಡಿಸಿರುವ 5 ಕೋಟಿ ರೂ. ಗೆ ಹೆಚ್ಚುವರಿಯಾಗಿ ಮತ್ತೆ 5 ಕೋಟಿ ರೂ.ಅನುದಾನವನ್ನು ಕಾಡಾನೆ ಹಾವಳಿ ತಡೆಗೆ ನೀಡುವುದಾಗಿ ಭರವಸೆ ನೀಡಿದ್ದಾರೆ. ತಮಿಳುನಾಡು ರಾಜ್ಯದಲ್ಲಿ ಈಗಾಗಲೇ ಅಳವಡಿಸಿ ಯಶಸ್ವಿಯಾಗಿರುವ ರೋಪ್ ಫೆನ್ಸ್ ತಂತ್ರಜ್ಞಾನವನ್ನು ಈ ಅನುದಾನ ಬಳಸಿಕೊಂಡು ಶೀಘ್ರದಲ್ಲಿಯೇ ಪ್ರಾಯೋಗಿಕವಾಗಿ ರಾಜ್ಯದ ನಾಗರಹೊಳೆಯಲ್ಲಿ ಅಳವಡಿಸಲಾಗುತ್ತದೆ ಎಂದರಲ್ಲದೇ, ವನ್ಯಜೀವಿಗಳಿಂದ ಕೖಷಿ ಜಮೀನು ಹಾನಿಗೆ ಶೇ.100 ರಷ್ಟು ಪರಿಹಾರ ನೀಡಲು ವಾಸ್ತವ ನೆಲೆಗಟ್ಟಿನಲ್ಲಿ ಅಸಾಧ್ಯ ಎಂದು ಸ್ಪಷ್ಟಪಡಿಸಿದರು.
ಕಾಡಾನೆಗಳು ಅರಣ್ಯದಿಂದ ನಾಡಿನತ್ತ ಬಂದು ದಾಂಧಲೆ ನಡೆಸಲು ಕಾಡಿನಲ್ಲಿ ಅವುಗಳಿಗೆ ಪ್ರಮುಖ ಆಹಾರ ಕೊರತೆಯೇ ಕಾರಣವಾಗಿದೆ. ಕಾಡಿನಲ್ಲಿ ವನ್ಯಜೀವಿಗಳಿಗೆ ಅಗತ್ಯವಾದ ಆಹಾರದ ವ್ಯವಸ್ಥೆಗೂ ರಾಜ್ಯ ಅರಣ್ಯ ಇಲಾಖೆಯು ಗಂಭೀರವಾದ ಚಿಂತನೆ ಹರಿಸಿದೆ ಎಂದು ಜಾವೇದ್ ಅಕ್ತರ್ ಹೇಳಿದರು.
ಆಂತರಿಕ‌ ಬಳಕೆ ಹೆಚ್ಚಬೇಕು: ಭಾರತೀಯ ಕಾಫಿಯ ಆಂತರಿಕ ಹೆಚ್ಚಾಗಬೇಕು. ವಿದೇಶಿ ಸಂಸ್ಥೆಗಳು ಈಗಾಗಲೇ ಭಾರತದಾದ್ಯಂತ ಕಾಫಿ ಮಳಿಗೆ ಪ್ರಾರಂಭಿಸಿದ್ದು, ಗ್ರಾಮೀಣ ಪ್ರದೇಶಗಳಲ್ಲಿಯೂ ಕಾಫಿ ದೊರಕುವಂತಾಗಿದೆ. ಹೀಗಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಕಾಫಿಯ ಆಂತರಿಕ ಬಳಕೆ ಹೆಚ್ಚಾಗಿಲ್ಲ. ಹಳ್ಳಿಗಳಲ್ಲಿಯೂ ನಗರಗಳ ಮಾದರಿಯಲ್ಲಿ ಕಾಫಿ ಪೇಯ ಮಾರಾಟದ ಸಣ್ಣ ಅಂಗಡಿಗಳು ತೆರೆದರೆ ಕಾಫಿಯ ಬಳಕೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಜಾವೇದ್ ಅಕ್ತರ್ ಅಭಿಪ್ರಾಯಪಟ್ಟರು.
4ಲಕ್ಷ ಮೆಟ್ರಿಕ್ ಟನ್ ನಿರೀಕ್ಷೆ: 2015-16 ನೇ ಸಾಲಿನಲ್ಲಿ 3.05 ಮೆಟ್ರಿಕ್ ಟನ್ ಉತ್ಪಾದಿಸಲ್ಪಡುತ್ತಿದ್ದ ಭಾರತೀಯ ಕಾಫಿ 2022-23 ನೇ ಸಾಲಿನಲ್ಲಿ ದಾಖಲೆಯ 4 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯಾಗುವ ನಿರೀಕ್ಷೆಯಿದೆ. ಇದು ಕಾಫಿ ಬೆಳೆಗಾರರರಿಗೆ ಆರ್ಥಿಕವಾಗಿಯೂ ಉತ್ತಮ ವರ್ಷವಾಗುವ ಆಶಾಕಿರಣಕ್ಕೆ ಕಾರಣವಾಗಿದೆ ಎಂದು ಭರವಸೆಯ ನುಡಿಯಾಡಿದ ಜಾವೇದ್ ಅಕ್ತರ್, ಭಾರತದಲ್ಲಿನ ಅರೇಬಿಕಾ ಕಾಫಿ ಇಂದಿಗೂ ವಿಶ್ವದಲ್ಲಿಯೇ ಅತ್ಯುತ್ತಮ ಕಾಫಿ ಎಂಬ ಹೆಗ್ಗಳಿಕೆಯನ್ನು ಉಳಿಸಿಕೊಂಡಿರುವುದು ಭಾರತದ ಕಾಫಿಯ ಗುಣಮಟ್ಟದ ಶ್ರೇಷ್ಟತೆಗೆ ಉದಾಹರಣೆಯಾಗಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!