ತಮಿಳುನಾಡು ಅಭಿವೃದ್ಧಿಗೆ ಕ್ರಿಶ್ಚಿಯನ್ನರೇ ಕಾರಣ, ಅವರು ಬಯಸಿದನ್ನು ಸರ್ಕಾರ ಮಾಡುತ್ತಿದೆ: ಡಿಎಂಕೆ ನಾಯಕ ಅಪ್ಪಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ತಮಿಳುನಾಡು ರಾಜ್ಯದ ಅಭಿವೃದ್ಧಿಗೆ ಕ್ರಿಶ್ಚಿಯನ್ನರೇ ಕಾರಣ. ಕ್ಯಾಥೋಲಿಕ್ ಕ್ರಿಶ್ಚಿಯನ್ನರು ಇಲ್ಲದಿದ್ದರೆ ತಮಿಳುನಾಡು ಬಿಹಾರವಾಗಿರುತ್ತಿತ್ತು ಎಂದು ಹೇಳುವ ಮೂಲಕ ರಾಜ್ಯದ ವಿಧಾನಸಭಾಧ್ಯಕ್ಷ ಹಾಗೂ ಡಿಎಂಕೆ ನಾಯಕ ಎಂ.ಅಪ್ಪಾವು ದೊಡ್ಡ ವಿವಾದವೊಂದನ್ನು ಸೃಷ್ಟಿಸಿದ್ದಾರೆ.
ಕಳೆದ ತಿಂಗಳು ಜೂನ್ 28 ರಂದು, ಅಪ್ಪಾವು ಮತ್ತು ಡಿಎಂಕೆ ಎಲ್ಎಂಎ ಇನಿಗೊ ಇರುದಯರಾಜ್ ತಿರುಚಿರಾಪಳ್ಳಿಯಲ್ಲಿರುವ ಸೇಂಟ್ ಪಾಲ್ ಸೆಮಿನರಿಯ ಶತಮಾನೋತ್ಸವ ಆಚರಣೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಅಪ್ಪಾವು ಆಡಿದ ಮಾತುಗಳು ಈಗ ವೈರಲ್‌ ಆಗುತ್ತಿದ್ದು ರಾಜ್ಯಾದ್ಯಂತ ವ್ಯಾಪಕ ಆಕ್ರೋಶಗಳು ವ್ಯಕ್ತವಾಗುತ್ತಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಅಪ್ಪಾವು, ಕ್ರಿಶ್ಚಿಯನ್ ಫಾದರ್ ಮತ್ತು ಸಿಸ್ಟರ್ಸ್ ಇಲ್ಲದಿದ್ದರೆ ತಮಿಳುನಾಡು ಬಿಹಾರದಂತಾಗುತ್ತಿತ್ತು, ನಾನು ಇಂದು ಈ ಸ್ಥಾನಕ್ಕೆ ಬೆಳೆಯಲು ಕ್ಯಾಥೋಲಿಕ್ ಫಾದರ್ ಮತ್ತು ಸಿಸ್ಟರ್ ಮಾತ್ರವೇ  ಸಹಾಯ ಮಾಡಿದ್ದಾರೆ. ತಮಿಳುನಾಡು ಸರ್ಕಾರ ನಿಮ್ಮ ಸರ್ಕಾರ. ನೀವು ಈ ಸರ್ಕಾರವನ್ನು ರಚಿಸಿದ್ದೀರಿ.. ನಿಮ್ಮ ಪ್ರಾರ್ಥನೆ ಮತ್ತು ಉಪವಾಸವು ಈ ಸರ್ಕಾರವನ್ನು ರಚಿಸಿದೆ. ತಮಿಳುನಾಡಿನಲ್ಲಿ ಸಾಮಾಜಿಕ ನ್ಯಾಯ ಮತ್ತು ದ್ರಾವಿಡ ಮಾದರಿ ಸರ್ಕಾರ ಇರುವುದಕ್ಕೆ ಕ್ಯಾಥೋಲಿಕ್ ಕ್ರಿಶ್ಚಿಯನ್ನರು ಮತ್ತು ಕ್ರಿಶ್ಚಿಯನ್ ಫಾದರ್‌ಗಳು ಕಾರಣ.
ನೀವು (ಕ್ಯಾಥೋಲಿಕ್ ಕ್ರಿಶ್ಚಿಯನ್ನರು) ಯಾರನ್ನೂ ಅವಲಂಬಿಸುವ ಅಗತ್ಯವಿಲ್ಲ, ನಿಮ್ಮ ಎಲ್ಲಾ ಸಮಸ್ಯೆಗಳನ್ನು ಪಟ್ಟಿ ಮಾಡಿ ನೇರವಾಗಿ ಮುಖ್ಯಮಂತ್ರಿಗೆ ನೀಡಿ.. ಅವರು ಏನನ್ನೂ ನಿರಾಕರಿಸುವುದಿಲ್ಲ ಮತ್ತು ನಿಮ್ಮೆಲ್ಲಾ ಸಮಸ್ಯೆಯನ್ನು ಪರಿಹರಿಸುತ್ತಾರೆ. ಏಕೆಂದರೆ ಈ ಸರ್ಕಾರ ರಚನೆಗೆ ನೀವೇ ಕಾರಣ ಎಂಬುದು ಮುಖ್ಯಮಂತ್ರಿಗೆ ತಿಳಿದಿದೆ. ಇದರಲ್ಲಿ ನಾನು ನಿಮ್ಮೊಂದಿಗಿದ್ದೇನೆ. ತಮಿಳುನಾಡಿನಿಂದ ಕ್ರಿಶ್ಚಿಯನ್ನರನ್ನು ತೊಲಗಿಸಿದರೆ ಯಾವುದೇ ಅಭಿವೃದ್ಧಿಯಾಗುವುದಿಲ್ಲ. ತಮಿಳುನಾಡಿನ ಅಭಿವೃದ್ಧಿಗೆ ಕ್ಯಾಥೋಲಿಕ್ ಕ್ರಿಶ್ಚಿಯನ್ನರು ಮುಖ್ಯ ಕಾರಣ ಎಂದು ಹೇಳಿದ್ದರು.
ಅಪ್ಪಾವು ಭಾಷಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಪ್ರತಿಪಕ್ಷ ಬಿಜೆಪಿಯು ಡಿಎಂಕೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.  “ಇದೇನಾ ಡಿಎಂಕೆಯ ಸೆಕ್ಯುಲರಿಸಂ? ಅವರು ತಮ್ಮನ್ನು ಜಾತ್ಯತೀತ ಪಕ್ಷ ಎಂದು ಕರೆದುಕೊಳ್ಳುವ ಹಕ್ಕು ಕಳೆದುಕೊಂಡಿದ್ದಾರೆ. ಡಿಎಂಕೆ ಹಿಂದೂ ವಿರೋಧಿ ಪಕ್ಷ ಎಂಬುದು ಈಗ ಸ್ಪಷ್ಟವಾಗಿ ಸಾಬೀತಾಗಿದೆ ಎಂದು ತಮಿಳುನಾಡು ಬಿಜೆಪಿ ರಾಜ್ಯ ಉಪಾಧ್ಯಕ್ಷ ನಾರಾಯಣನ್ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅಪ್ಪಾವು, ಈ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.
“ಬಿಜೆಪಿ ನನ್ನ ಭಾಷಣವನ್ನು ಪ್ರಚಾರ ಮಾಡುತ್ತಿದ್ದರೆ ಅದು ಒಳ್ಳೆಯದು. ಹೌದು, ನಾನು ವೈರಲ್‌ ಆದ ವಿಚಾರಗಳನ್ನು ಹೇಳಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರಿಮ್ ಮಾಡಿದ ಫೂಟೇಜ್‌ ಗಳು ಮಾತ್ರ ಹರಡುತ್ತಿವೆ, ನಾನು ಏನು ಮಾತನಾಡಿದ್ದೇನೋ ಅದು ಈಗ ಕೇವಲ ಇತಿಹಾಸ, ಅಷ್ಟು ಮಾತ್ರವೇ ಆಗಿರಬೇಕು. ಇದರಲ್ಲಿ ಯಾವುದೇ ರಾಜಕೀಯ ಬೇಡ” ಎಂದು ಶ್ರೀ ಅಪ್ಪಾವು ಪ್ರತಿಕ್ರಿಯೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!