ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚಿನ ದಿನಗಳಲ್ಲಿ ಜನರು ಮನೆಯಲ್ಲಿಯೇ ಕುಳಿತು ಆನ್ಲೈನ್ನಲ್ಲಿಯೇ ಆರ್ಡರ್ ಮಾಡುತ್ತಾರೆ. ಈಗಂತೂ ಆನ್ಲೈನ್ ಸರ್ವಿಸ್ಗಳು ಒಂದಕ್ಕಿಂತ ಒಂದು ಸ್ಪೀಡ್ ಆಗಿದ್ದು ಆರ್ಡರ್ ಕೊಟ್ಟು ಕಣ್ಣುಮುಚ್ಚುವುದರೊಳಗೆ ಮನೆಗೆ ತಂದು ಕೊಡುತ್ತಾರೆ.
ಆದರೆ ಈ ಆನ್ಲೈನ್ ಸರ್ವಿಸ್ನಿಂದ ಎಷ್ಟು ಲಾಭಯೋ ಅಷ್ಟೇ ತೊಂದರೆವೂ ಇದೆ.ಇತ್ತೀಚೆಗಷ್ಟೇ ಬಾಲಕಿಯೊಬ್ಬಳು ಆನ್ಲೈನ್ನಲ್ಲಿ ಆರ್ಡರ್ ಮಾಡಿದ ಕೇಕ್ ತಿಂದು ಮರಣಹೊಂದಿದ ಘಟನೆ ಇನ್ನೂ ಮಾಸಿಲ್ಲ, ಅದರ ಬೆನ್ನಲ್ಲೇ ಈಗ ಮಹಿಳೆಯೊಬ್ಬರು ಆನ್ಲೈನ್ ನಲ್ಲಿ ಆರ್ಡರ್ ಮಾಡಿದ ಐಸ್ ಕ್ರೀಂನಲ್ಲಿ ಮನುಷ್ಯನ ಕೈಬೆರಳು ಇರುವುದು ಪತ್ತೆಯಾಗಿದೆ.
ಮುಂಬೈನ ಮಲಾಡ್ ಪ್ರದೇಶದ ಮಹಿಳೆಯೊಬ್ಬಳು ದಿನಸಿ ವಸ್ತುಗಳ ಜೊತೆಗೆ ತನ್ನ ಸಹೋದರನಿಗಾಗಿ ಯುಮ್ಮೋ ಐಸ್ ಕ್ರೀಂ ಕಂಪೆನಿಯ ಮೂರು ಬಟರ್ ಸ್ಕಾಚ್ ಕೋನ್ ಅನ್ನು ಆನ್ಲೈನ್ನಲ್ಲಿ ಆರ್ಡರ್ ಮಾಡಿದ್ದಾಳೆ. ಮನೆಗೆ ಬಂದ ಐಸ್ ಕ್ರೀಂ ಅನ್ನು ಸಹೋದರ ಬಿಚ್ಚಿ ತಿನ್ನುವಾಗ ನಾಲಿಗೆಗೆ ಏನೋ ತಗುಲಿದ ಹಾಗೆ ಆಗಿದೆ. ಆಗ ಆತ ಅದನ್ನು ಹೊರತೆಗೆದಾಗ ಅದು ಮನುಷ್ಯನ ಕೈಬೆರಳಾಗಿದ್ದು ಸುಮಾರು 2 ಸೆಂಟಿಮೀಟರ್ ಉದ್ದವಿತ್ತು ಎಂಬುದಾಗಿ ತಿಳಿದುಬಂದಿದೆ. ಮಹಿಳೆಯ ಸಹೋದರ ವೈದ್ಯನಾಗಿದ್ದ ಕಾರಣ ಆತ ಅದು ಮನುಷ್ಯನ ಕೈ ಬೆರಳು ಎಂದು ಕೂಡಲೇ ಪತ್ತೆ ಹಚ್ಚಿದ್ದಾನೆ.
ಈ ಬಗ್ಗೆ ಮಹಿಳೆ ಮಲಾಡ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಯುಮ್ಮೋ ಐಸ್ ಕ್ರೀಂ ಕಂಪನಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಹಾಗೇ ಐಸ್ ಕ್ರೀಂನಲ್ಲಿ ಪತ್ತೆಯಾದ ಮಾನವನ ಕೈಬೆರಳನ್ನು ಫೊರೆನ್ಸಿಕ್ಗೆ ಕಳುಹಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಪೊಲೀಸರು ಐಸ್ ಕ್ರೀಂ ಕಂಪನಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 272, 271 ಮತ್ತು 336 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.