ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರನ್ಯಾ ರಾವ್ ಕೇಸ್ ರೋಚಕ ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದು, ಈ ಪ್ರಕರಣದಲ್ಲಿ ರನ್ಯಾ ರಾವ್ ಜೊತೆಗಿದ್ದ ತರುಣ್ ರಾಜ್ ಅವರೇ ಕಿಂಗ್‌ಪಿನ್ ಎನ್ನಲಾಗಿದೆ.
ತರುಣ್ ರಾಜ್ ಅಲಿಯಾಸ್ ವಿರಾಟ್ ಕೊಂಡೂರು ಅನ್ನೋದು ಇಂಟ್ರೆಸ್ಟಿಂಗ್ ವಿಷಯವಾಗಿದ್ದು, ಈತ ಕರ್ನಾಟಕದಲ್ಲಿ ಖಳನಾಯಕನಾದ್ರೆ ತೆಲುಗು ಚಿತ್ರರಂಗದಲ್ಲಿ ಹೀರೋ.
ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ತನಿಖೆ ವೇಳೆ ತರುಣ್ ರಾಜುನ ಸಿನಿಮಾ ರಹಸ್ಯಗಳು ರಿವೀಲ್ ಆಗಿದೆ. ತೆಲುಗು ಚಿತ್ರರಂಗದಲ್ಲಿ ಇವರ ಹೆಸರು ವಿರಾಟ್ ಕೊಂಡೂರು. ತೆಲುಗು ಚಿತ್ರರಂಗದಲ್ಲಿ ಫುಲ್ ಆ್ಯಕ್ಟೀವ್ ಆಗಿದ್ದ ತರುಣ್ ರಾಜು, ಸಿನಿಮಾಗಾಗಿಯೇ ತನ್ನ ಹೆಸರನ್ನು ಬದಲಿಸಿಕೊಂಡಿದ್ದರು.
ತರುಣ್ ರಾಜು ಟಾಲಿವುಡ್‌ನಲ್ಲಿ ಎಲ್ಲರ ಜೊತೆಗೂ ವಿರಾಟ್ ಅಂತಲೇ ಗುರುತಿಸಿಕೊಂಡಿದ್ದರು. 2018ರಲ್ಲಿ ಪರಿಚಯಂ ಎಂಬ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದರು. ಅದಾದ ಬಳಿಕ ಸಿನಿಮಾ ಮೂಲಕವೇ ತರುಣ್ ಅವರು ನಟಿ ರನ್ಯಾ ಜೊತೆ ಸ್ನೇಹ ಬೆಳೆಸಿದ್ದರು.
ದುಬೈನಲ್ಲಿ ಚಿನ್ನ ಸಂಗ್ರಹಿಸುವ ಕುರಿತು ನಟಿ ರನ್ಯಾಗೆ ಸ್ನೇಹಿತ ಹಾಗೂ ಹೋಟೆಲ್ ಉದ್ಯಮಿ ಪುತ್ರ ತರುಣ್ ರಾಜ್ ಮಾಹಿತಿ ನೀಡುತ್ತಿದ್ದ ಎಂದು ಮೂಲಗಳು ಹೇಳಿವೆ. ದುಬೈನಲ್ಲಿ ಯಾರಿಂದ ಚಿನ್ನ ಪಡೆದು ಆನಂತರ ಹೇಗೆ ಬೆಂಗಳೂರಿಗೆ ಸಾಗಿಸಬೇಕು ಎಂಬ ನೀಲನಕ್ಷೆಯನ್ನು ರನ್ಯಾಗೆ ತರುಣ್ ರವಾನಿಸುತ್ತಿದ್ದ.
ದುಬೈ ಪಯಣದಲ್ಲಿ ಗೆಳತಿ ಜತೆ ನಿರಂತರವಾಗಿ ಆತ ಸಂಪರ್ಕದಲ್ಲಿದ್ದು ಸೂಚನೆ ಕೊಡುತ್ತಿದ್ದ. ತನ್ನ ಗೆಳೆಯನ ಸೂಚನೆ ಅನುಸಾರ ರನ್ಯಾ ನಡೆದುಕೊಳ್ಳುತ್ತಿದ್ದಳು ಎಂಬ ವಿಚಾರ ಪ್ರಾಥಮಿಕ ತನಿಖೆ ವೇಳೆ ಬೆಳಕಿಗೆ ಬಂದಿದೆ.
DRI ಬಂಧನದ ಬಳಿಕ ಆರೋಪಿ ತರುಣ್ ರಾಜ್ ವಿಚಾರಣೆ ಕೂಡ ಚುರುಕಾಗಿದೆ. ಆದರೆ ತರುಣ್ ತನಿಖೆಯಲ್ಲಿ ಮಾತ್ರ ಯಾವುದೇ ಮಾಹಿತಿ ಬಾಯ್ಬಿಡುತ್ತಿಲ್ಲ. ಹೀಗಾಗಿ ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ತರುಣ್ ರಾಜ್ ಅವರ ಬ್ಯಾಂಕ್ ಅಕೌಂಟ್ ಡಿಟೇಲ್ಸ್‌ಗಳ ಬೆನ್ನು ಬಿದ್ದಿದೆ.
ತರುಣ್ ರಾಜ್ ಅಕೌಂಟ್‌ನಿಂದ ಯಾರಿಗೆ ಹಣ ಹೋಗಿದೆ? ಯಾರಿಗೆ ವ್ಯವಹಾರ ಇತ್ತು? ತರುಣ್ಗೆ ಯಾವುದಾದ್ರೂ ಜ್ಯೂವೆಲ್ಲರಿ ಶಾಪ್ಗಳ ನಂಟಿದ್ಯಾ? ಈ ಎಲ್ಲದರ ಮಾಹಿತಿಯನ್ನು DRI ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ.