ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ಇತಿಹಾಸದಲ್ಲಿ ‘ಕೆನಡಿ’ ಎಂಬ ಹೆಸರಿಗೆ ತನ್ನದೇ ಆದ ತೂಕವಿದೆ. ಆ ಭವ್ಯ ಪರಂಪರೆಯ ಮೂರನೇ ತಲೆಮಾರಿನ ಪ್ರತಿಭಾವಂತ ವ್ಯಕ್ತಿತ್ವ, ಮಾಜಿ ಅಧ್ಯಕ್ಷ ಜಾನ್ ಎಫ್. ಕೆನಡಿ ಅವರ ಮೊಮ್ಮಗಳು ಟಟಿಯಾನಾ ಸ್ಕ್ಲೋಸ್‌ಬರ್ಗ್ (35) ಇಂದು ನಿಧನರಾಗಿದ್ದಾರೆ. ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಸೋತ ಟಟಿಯಾನಾ, ಇಡೀ ಕೆನಡಿ ಕುಟುಂಬವನ್ನು ಮತ್ತೆ ಶೋಕಸಾಗರದಲ್ಲಿ ಮುಳುಗಿಸಿದ್ದಾರೆ.
“ನಮ್ಮ ಸುಂದರ ಟಟಿಯಾನಾ ಇಂದು ಬೆಳಿಗ್ಗೆ ನಮ್ಮನ್ನು ಅಗಲಿದ್ದಾರೆ. ಅವರು ಯಾವಾಗಲೂ ನಮ್ಮ ಹೃದಯದ ಮಿಡಿತವಾಗಿರುತ್ತಾರೆ,” ಎಂದು ಜೆಎಫ್‌ಕೆ ಲೈಬ್ರರಿ ಫೌಂಡೇಶನ್ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಭಾವುಕವಾಗಿ ಬರೆದುಕೊಂಡಿದೆ. ಕ್ಯಾರೋಲಿನ್ ಕೆನಡಿ ಮತ್ತು ಎಡ್ವಿನ್ ಸ್ಕ್ಲೋಸ್‌ಬರ್ಗ್ ಅವರ ಪುತ್ರಿಯಾದ ಟಟಿಯಾನಾ, ಕೇವಲ ಒಬ್ಬ ವಾರಸುದಾರರಾಗಿ ಉಳಿಯದೆ, ತನ್ನದೇ ಆದ ಸ್ವತಂತ್ರ ಗುರುತನ್ನು ಮೂಡಿಸಿದ್ದರು.
ಕಳೆದ ಕೆಲವು ಸಮಯದಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು, ಈ ಕಾಯಿಲೆಯನ್ನು ಎದುರಿಸಿದ ರೀತಿ ನಿಜಕ್ಕೂ ಸ್ಫೂರ್ತಿದಾಯಕ. ಕೀಮೋಥೆರಪಿ ಮತ್ತು ಮೂಳೆ ಮಜ್ಜೆಯ ಕಸಿ ಅಂತಹ ಕಠಿಣ ಚಿಕಿತ್ಸೆಗಳಿಗೆ ಒಳಗಾಗಿದ್ದರೂ, ಸಾವಿನ ಸನಿಹದಲ್ಲಿದ್ದೇನೆ ಎಂಬ ಅರಿವಿದ್ದರೂ ಅವರು ಕುಗ್ಗಿರಲಿಲ್ಲ.
ಟಟಿಯಾನಾ ಅವರು ಕೇವಲ ರಾಜಕೀಯ ಕುಟುಂಬದ ಹಿನ್ನೆಲೆಯಿಂದ ಗುರುತಿಸಿಕೊಳ್ಳಲಿಲ್ಲ. ‘ದಿ ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯ ಪರಿಸರ ವರದಿಗಾರರಾಗಿ ಅವರು ಹವಾಮಾನ ಬದಲಾವಣೆಯ ಕುರಿತು ಜಾಗೃತಿ ಮೂಡಿಸಿದ್ದರು. ಇವರ ಬರಹಗಳಲ್ಲಿ ಬದ್ಧತೆ ಮತ್ತು ಸಾಮಾಜಿಕ ಕಳಕಳಿ ಎದ್ದು ಕಾಣುತ್ತಿತ್ತು. ತಮ್ಮ ಸೋದರ ಸಂಬಂಧಿ ರಾಬರ್ಟ್ ಎಫ್. ಕೆನಡಿ ಜೂನಿಯರ್ ಅವರ ರಾಜಕೀಯ ನಿಲುವುಗಳನ್ನು ಬಹಿರಂಗವಾಗಿ ಟೀಕಿಸುವ ಮೂಲಕ ಟಟಿಯಾನಾ ತಾವು ಸದಾ ಸತ್ಯ ಮತ್ತು ವಿಜ್ಞಾನದ ಪರ ಎಂಬುದನ್ನು ಸಾಬೀತುಪಡಿಸಿದ್ದರು. ಕುಟುಂಬದ ಸದಸ್ಯರಾದರೂ ತತ್ವ ಸಿದ್ಧಾಂತಗಳ ವಿಷಯದಲ್ಲಿ ಅವರು ಎಂದೂ ರಾಜಿ ಮಾಡಿಕೊಂಡಿರಲಿಲ್ಲ.

