ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಸದ್ಯ ಭಾರೀ ಸುದ್ದಿ ಮಾಡುತ್ತಿರುವ ಜೊತೆಗೆ ಅನೇಕ ಜನರ ಮನಸ್ಸು ಮುಟ್ಟಿರುವ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೆ ಈಗಾಗಲೇ ಬಿಜೆಪಿ ಆಡಳಿತದ ಅನೇಕ ರಾಜ್ಯಗಳು ತೆರಿಗೆ ವಿನಾಯಿತಿ ನೀಡಿದ್ದು, ಇದೀಗ ರಾಜಸ್ಥಾನದಲ್ಲಿ ತೆರಿಗೆ ರಹಿತ ಪ್ರದರ್ಶನದ ಅವಕಾಶ ನೀಡಬೇಕೆಂದು ಕಾಂಗ್ರೆಸ್ ಸರ್ಕಾರಕ್ಕೆ ತಮ್ಮದೇ ಪಕ್ಷದ ಶಾಸಕರೊಬ್ಬರು ಆಗ್ರಹಿಸಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ಕಾಶ್ಮೀರಿ ಹಿಂದೂಗಳ ಹತ್ಯೆ ಮತ್ತು ಅವರ ವಲಸೆ ಕುರಿತಾದ ಈ ಚಿತ್ರಕ್ಕೆ ಬಿಜೆಪಿ ಆಡಳಿತ ಇರುವ ಕರ್ನಾಟಕ, ಹರಿಯಾಣ, ಗುಜರಾತ್ ಮತ್ತು ಮಧ್ಯಪ್ರದೇಶದಲ್ಲಿ ತೆರಿಗೆ ರಹಿತ ಪ್ರದರ್ಶನದ ಬಗ್ಗೆ ಘೋಷಣೆ ಮಾಡಲಾಗಿದೆ.
ರಾಜಸ್ಥಾನದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೆ ಇಂತಹ ಅವಕಾಶ ಮಾಡಿಕೊಡಬೇಕೆಂಬ ಒತ್ತಾಯ ಕೇಳಿ ಬರುತ್ತಿದ್ದು, ಕಾಂಗ್ರೆಸ್ ಶಾಸಕ ಭನ್ವರ್ ಲಾಲ್ ಶರ್ಮಾ, ನಮ್ಮ ರಾಜ್ಯದಲ್ಲೂ ಸಹ ತೆರಿಗೆ ರಹಿತ ಪ್ರದರ್ಶನದ ಅವಕಾಶ ನೀಡಬೇಕು. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.
ಇದರ ಜೊತೆಗೆ ಮಾಜಿ ಮುಖ್ಯಮಂತ್ರಿಯಾದ ಬಿಜೆಪಿ ನಾಯಕಿ ವಸುಂಧರಾ ರಾಜೇ ಕೂಡ ಚಿತ್ರಕ್ಕೆ ತೆರಿಗೆ ಮುಕ್ತ ಅವಕಾಶ ಕೊಡಬೇಕೆಂದು ಒತ್ತಾಯಿಸಿದ್ದಾರೆ.