ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿಗಳ ಪಾರ್ಕಿಂಗ್ ಮತ್ತು ಪಿಕಪ್‌ಗೆ ಸಂಬಂಧಿಸಿದ ಹೊಸ ನಿಯಮಗಳ ವಿರುದ್ಧ ಸಾವಿರಾರು ಟ್ಯಾಕ್ಸಿ ಚಾಲಕರು ಬೀದಿಗಿಳಿದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೊಸ ರೂಲ್ಸ್‌ಗಳಿಂದ ಕೆರಳಿದ ಚಾಲಕರು ಏರ್‌ಪೋರ್ಟ್ ಬಳಿಯ ಸಾದಹಳ್ಳಿ ಟೋಲ್ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಆಕ್ರೋಶಕ್ಕೆ ಕಾರಣವಾದ ಹೊಸ ನಿಯಮಗಳು:
ಟರ್ಮಿನಲ್ 2 ರಲ್ಲಿ ಪಾರ್ಕಿಂಗ್ ಶುಲ್ಕ: ಸೈಡ್ ಪಿಕಪ್ ವಾಹನಗಳಿಗೆ ಟರ್ಮಿನಲ್ 2 ರಲ್ಲಿ ಪಾರ್ಕಿಂಗ್ ಶುಲ್ಕ ವಿಧಿಸಿರುವುದು.
8 ನಿಮಿಷಗಳ ನಂತರ ದಂಡ: ವಿಮಾನ ನಿಲ್ದಾಣದೊಳಗೆ 8 ನಿಮಿಷಗಳಿಗಿಂತ ಹೆಚ್ಚು ಕಾಲ ವಾಹನ ನಿಲ್ಲಿಸಿದರೆ 150 ರೂ. ದಂಡ ವಿಧಿಸುವುದು.
ಪ್ರೈವೇಟ್ ವಾಹನಗಳ ಸ್ಥಳಾಂತರ: ಖಾಸಗಿ ವಾಹನಗಳಿಗೆ ಏರ್‌ಪೋರ್ಟ್ ಹೊರಗೆ ಪಾರ್ಕಿಂಗ್ ಸ್ಥಳ ನಿಯೋಜಿಸಿರುವುದು.
ಈ ನಿಯಮಗಳಿಂದ ತಮಗೆ ಆರ್ಥಿಕ ಹೊರೆ ಮತ್ತು ಅನಾನುಕೂಲತೆ ಉಂಟಾಗುತ್ತಿದೆ ಎಂದು ಆರೋಪಿಸಿದ ನೂರಾರು ಚಾಲಕರು ಏಕಕಾಲಕ್ಕೆ ಪ್ರತಿಭಟನೆಯಲ್ಲಿ ಭಾಗವಹಿಸಿದರು. ರಸ್ತೆ ತಡೆದು ನಡೆಸಿದ ಪ್ರತಿಭಟನೆಯು ಉಗ್ರ ರೂಪ ತಾಳಿದ್ದು, ಕೆಲ ಚಾಲಕರು ವಾಹನಗಳ ಮೇಲೆ ವಾಟರ್ ಬಾಟಲ್‌ಗಳನ್ನು ಎಸೆದು ತಮ್ಮ ಸಿಟ್ಟನ್ನು ಪ್ರದರ್ಶಿಸಿದರು.
ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪ್ರತಿಭಟನಾಕಾರರನ್ನು ಚದುರಿಸಿದರು. ಬಳಿಕ ಡಿಸಿಪಿ ಸಜಿತ್ ಅವರ ನೇತೃತ್ವದಲ್ಲಿ ಪೊಲೀಸರು ಚಾಲಕರ ಮನವೊಲಿಸುವಲ್ಲಿ ಯಶಸ್ವಿಯಾದರು. “ಎರಡು ದಿನಗಳ ಕಾಲಾವಕಾಶ ನೀಡಿ, ನಾವು ಏರ್‌ಪೋರ್ಟ್ ಆಡಳಿತ ಮಂಡಳಿ ಜೊತೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ” ಎಂದು ಪೊಲೀಸರು ಭರವಸೆ ನೀಡಿದರು.
ಪೊಲೀಸರ ಮಾತಿಗೆ ಒಪ್ಪಿದ ಚಾಲಕರು ಪ್ರತಿಭಟನೆ ಹಿಂಪಡೆದರೂ, ತಮ್ಮ ಬೇಡಿಕೆಗಳು ಈಡೇರದಿದ್ದರೆ ಮತ್ತೆ ಏರ್‌ಪೋರ್ಟ್‌ಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ. ಜಂಟಿ ಪೊಲೀಸ್ ಆಯುಕ್ತರಾದ ರಮೇಶ ಬಾನೋತ್ ಸಹ ಶೀಘ್ರದಲ್ಲಿಯೇ ಮೇಲಾಧಿಕಾರಿಗಳ ಜೊತೆ ಮಾತನಾಡಿ ಸಮಸ್ಯೆ ಇತ್ಯರ್ಥಪಡಿಸುವುದಾಗಿ ಭರವಸೆ ನೀಡಿದರು.
ಪ್ರಸ್ತುತ ಪರಿಸ್ಥಿತಿ ತಿಳಿಯಾಗಿದ್ದು, ಚಾಲಕರು ಕರ್ತವ್ಯಕ್ಕೆ ಮರಳಿದ್ದಾರೆ. ಚಾಲಕರ ಸಂಘವು, “ನಾಲ್ಕು ದಿನಗಳ ಕಾಲ ತಾಳ್ಮೆಯಿಂದ ಇರುತ್ತೇವೆ. ಆಗಲೂ ಸ್ಪಂದಿಸದಿದ್ದರೆ ಮುಂದಿನ ದಾರಿ ಉಪವಾಸ ಸತ್ಯಾಗ್ರಹ” ಎಂದು ಘೋಷಿಸಿದೆ.

