ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ಸೇರಿ ಮೂರು ರಾಜ್ಯಗಳ ರೈತರ ಜೀವಜಲವಾಗಿರುವ ತುಂಗಭದ್ರಾ ಜಲಾಶಯದ ಎಲ್ಲಾ 33 ನೂತನ ಕ್ರಸ್ಟ್ ಗೇಟ್‌ಗಳನ್ನು ಇಂದು ಲೋಕಾರ್ಪಣೆಗೊಳ್ಳುತ್ತಿವೆ.
ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣದ ಮುಖ್ಯಮಂತ್ರಿಗಳು ಆಗಮಿಸಲಿದ್ದಾರೆ. ತುಂಗಭದ್ರಾ ಜಲಾಶಯಕ್ಕೆ ಇದೀಗ ಹೊಸ ಕಳೆ ಬಂದಿದ್ದು, ಜಲಸಂಪನ್ಮೂಲ ಇಲಾಖೆ ಎಲ್ಲ ಕ್ರಸ್ಟ್ ಗೇಟ್‌ಗಳನ್ನು ಇಂದು ಲೋಕಾರ್ಪಣೆಗೊಳಿಸಲಿದೆ.
2024ರ ಆಗಸ್ಟ್‌ನಲ್ಲಿ ಜಲಾಶಯದ 19ನೇ ಕ್ರಸ್ಟ್ ಗೇಟ್ ಒಡೆದು ಲಕ್ಷಾಂತರ ಕ್ಯೂಸೆಕ್ ನೀರು ನದಿಪಾಲಾಗಿತ್ತು. ನೀರಿಲ್ಲದೆ ಕೊಪ್ಪಳ, ರಾಯಚೂರು ಹಾಗೂ ವಿಜಯನಗರದ ರೈತರು ದುಃಖತಪ್ತರಾಗಿದ್ದರು. ರೈತರ ಕಣ್ಣೀರನ್ನು ಗಂಭೀರವಾಗಿ ತೆಗೆದುಕೊಂಡ ಸರ್ಕಾರ ಒಂದು ಗೇಟ್ ರಿಪೇರ್ ಮಾಡುವ ಬದಲಾಗಿ ಡ್ಯಾಂನ ಎಲ್ಲ ಕ್ರಸ್ಟ್ ಗೇಟ್‌ಗಳನ್ನು ಬದಲಾಯಿಸಿದೆ.
ಬರೋಬ್ಬರಿ 51 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ 33 ನೂತನ ಕ್ರಸ್ಟ್ ಗೇಟ್‌ಗಳನ್ನು ಯಶಸ್ವಿಯಾಗಿ ಅಳವಡಿಸಲಾಗಿದೆ. ನವಜೀವನ ಪಡೆದ ಡ್ಯಾಂ ಇಂದು ಅಧಿಕೃತವಾಗಿ ಲೋಕಾರ್ಪಣೆಗೊಳ್ಳಲಿದೆ. ಈ ಕಾರ್ಯಕ್ರಮಕ್ಕೆ ಮೂರು ರಾಜ್ಯಗಳ ಸಿಎಂ ಆಗಮಿಸಲಿದ್ದು, ಎಲ್ಲರೂ ಗೇಟ್ ಲೋಕಾರ್ಪಣೆ ಮಾಡಲಿದ್ದಾರೆ. ಇನ್ನು ಕೇಂದ್ರ ಜಲಶಕ್ತಿ ಸಚಿವರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮೊದಲು ನಾಯಕರು ಜಲಾಶಯದ ಮೇಲೆ ಗೇಟ್ ಲೋಕಾರ್ಪಣೆ ಮಾಡಲಿದ್ದು, ನಂತರ 10 ಸಾವಿರಕ್ಕೂ ಹೆಚ್ಚು ಆಸನ ವ್ಯವಸ್ಥೆ ಇರುವ ಬೃಹತ್ ವೇದಿಕೆ ಮುಖ್ಯ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.



