ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿಡಿಪಿ ಅಧ್ಯಕ್ಷ ಚಂದ್ರಬಾಬು ಅವರು ಮಾಚರ್ಲಾ ಘಟನೆ ಕುರಿತು ಗುಂಟೂರಿನ ಡಿಐಜಿಗೆ ಕರೆ ಮಾಡಿ ಕೆಂಡಾಮಂಡಲರಾಗಿದ್ದಾರೆ. ಪರಿಸ್ಥಿತಿ ಇಷ್ಟೊಂದು ಹದಗೆಟ್ಟಿದ್ದರೂ ಪೊಲೀಸರು ಏಕೆ ಸ್ಪಂದಿಸಲಿಲ್ಲ ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಆಡಳಿತ ಪಕ್ಷದವರ ರೌಡಿಸಂಗೆ ಪೊಲೀಸರು ಕಣ್ಣು ಮುಚ್ಚಿ ಕುಳಿತಿರುವುದು ಅವರಿಗೆ ಕುಮ್ಮಕ್ಕು ನೀಡಿದಂತಿದೆ ಎಂದು ಟ್ವೀಟ್ ಮಾಡಿದ್ದಾರೆ. ಇದು ರಾಜ್ಯದಲ್ಲಿ ಶಾಂತಿ ಮತ್ತು ಭದ್ರತೆ ಹದಗೆಡುತ್ತಿರುವುದನ್ನು ಬಿಂಬಿಸುತ್ತದೆ ಎಂದರು. ಮತ್ತೊಂದೆಡೆ, ಟಿಡಿಪಿ ಮುಖಂಡ ನಾರಾ ಲೋಕೇಶ್ ಅವರು ಮಾಚರ್ಲಾ ಘಟನೆಯನ್ನು ಖಂಡಿಸಿ ಟ್ವೀಟ್ ಮಾಡಿದ್ದಾರೆ.
ಮಾಚರ್ಲಾ ಕ್ಷೇತ್ರದಲ್ಲಿ ವೈಸಿಪಿ ರೌಡಿಗಳು ಪೊಲೀಸರ ನೆರವಿನಿಂದ ಟಿಡಿಪಿ ಪದಾಧಿಕಾರಿಗಳ ಮೇಲೆ ಹಲ್ಲೆ ನಡೆಸಿರುವುದು ಅತಿರೇಕದ ಸಂಗತಿ. ನಮ್ಮ ರಾಜ್ಯಕ್ಕಾಗಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಟಿಡಿಪಿ ಮುಖಂಡರ ಮೇಲೆ ವೈಸಿಪಿ ರೌಡಿಗಳು ಹಲ್ಲೆ ನಡೆಸುತ್ತಿರುವುದು ರಾಜ್ಯದಲ್ಲಿ ಅರಾಜಕತೆಗೆ ಸಾಕ್ಷಿಯಾಗಿದೆ. ಹಲ್ಲೆ ಮಾಡಿದ ವೈಸಿಪಿ ಗೂಂಡಾಗಳನ್ನು ಬಿಟ್ಟು ಟಿಡಿಪಿ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿರುವುದು ಅತಿರೇಕದ ಸಂಗತಿ ಎಂದು ಲೋಕೇಶ್ ಕೆಂಡ ಕಾರಿದ್ದಾರೆ.
ವೈಸಿಪಿ ಕಾರ್ಯಕರ್ತರು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಮತ್ತೊಂದು ಗುಂಪು ಟಿಡಿಪಿ ಕಚೇರಿಗೆ ಬೆಂಕಿ ಹಚ್ಚಿದೆ. ತೆಲುಗು ದೇಶಂ ಪಕ್ಷದ ಮುಖಂಡ ಬ್ರಹ್ಮಾ ರೆಡ್ಡಿ ಮನೆ ಮೇಲೆ ದಾಳಿ ನಡೆದಿದೆ. ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಬ್ರಹ್ಮಾರೆಡ್ಡಿ ಅವರನ್ನು ಮಾಚರ್ಲದಿಂದ ಹೊರ ಕಳುಹಿಸಲಾಗಿದೆ. ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.