ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಅರೆಸ್ಟ್:‌ ಎಪಿಯಲ್ಲಿ ಉದ್ವಿಗ್ನ ಪರಿಸ್ಥಿತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೌಶಲ್ಯಾಭಿವೃದ್ಧಿ ಹಗರಣ ಪ್ರಕರಣದಲ್ಲಿ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರನ್ನು ಶುಕ್ರವಾರ ತಡರಾತ್ರಿ ಸಿಐಡಿ ಪೊಲೀಸರು ಬಂಧಿಸಿದ್ದಾರೆ. ನಂದ್ಯಾಲದಲ್ಲಿ ಚಂದ್ರಬಾಬು ತಂಗಿದ್ದ ಬಸ್ಸಿನಿಂದ ಕೆಳಗಿಳಿಸಿದ ಪೊಲೀಸರು, ಕೌಶಲ್ಯಾಭಿವೃದ್ಧಿ ಹಗರಣದಲ್ಲಿ ಚಂದ್ರಬಾಬು ಎ1 ಆರೋಪಿ ಎಂಬ ಕಾರಣ ಕೊಟ್ಟು ಬಂಧಿಸಲಾಗಿದೆ.

ಹಗರಣದ ಕುರಿತು ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ, ನ್ಯಾಯಾಲಯದಲ್ಲಿ ಪ್ರಕರಣವು ಬಾಕಿ ಉಳಿದಿರುವಾಗಲೇ ನನ್ನನ್ನು ಹೇಗೆ ಬಂಧಿಸುತ್ತೀರಿ? ಎಂದು ಚಂದ್ರಬಾಬು ಪ್ರಶ್ನಿಸಿದರು. ಪ್ರಕರಣದ ದಾಖಲೆಗಳನ್ನು ನೀಡುವಂತೆ ಮತ್ತು ಎಫ್‌ಐಆರ್‌ನ ಪ್ರತಿ ತೋರಿಸುವಂತೆ ಚಂದ್ರಬಾಬು ವಕೀಲರು ಕೇಳಿದ ಬೆನ್ನಲ್ಲೇ ರಿಮಾಂಡ್ ವರದಿ ನೀಡಲು ಸಾಧ್ಯವಿಲ್ಲ. ಈ ಹಗರಣದಲ್ಲಿ ಚಂದ್ರಬಾಬು ಹಸ್ತವಿದೆ ಎಂಬುದನ್ನು ನ್ಯಾಯಾಲಯಕ್ಕೆ ಈಗಾಗಲೇ ಮನವರಿಕೆ ಮಾಡಿಕೊಟ್ಟಿರುವುದಾಗಿಯೂ ಪೊಲೀಸರು ತಿಳಿಸಿದರು.

ಚಂದ್ರಬಾಬು ನಾಯ್ಡು ಮತ್ತವರ ವಕೀಲರ ವಾದ/ವಿವಾದದ ನಡುವೆಯೇ ಸಿಐಡಿ ಪೊಲೀಸರು ಬಂಧಿಸಿದರು. ಡಿ.ಕೆ.ಬಸು ಪ್ರಕರಣದ ಪ್ರಕಾರ ನಡೆದುಕೊಂಡಿದ್ದೇವೆ ಎಂಬ ವಿವರಣೆ ಕೊಟ್ಟ ಪೊಲೀಸರು, 24 ಗಂಟೆಗಳಲ್ಲಿ ಬಂಧನಕ್ಕೆ ಕಾರಣಗಳಿರುವ ದಾಖಲೆಗಳನ್ನು ನೀಡುವುದಾಗಿ ತಿಳಿಸಿದ್ದಾರೆ. ಚಂದ್ರಬಾಬು ಬಂಧನದ ಬಳಿಕ ಪ್ರಸ್ತುತ ಅವರನ್ನು ವಿಜಯವಾಡಕ್ಕೆ ಸ್ಥಳಾಂತರಿಸಲು ಯತ್ನಿಸುತ್ತಿರುವುದಾಗಿ ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.

ನಂದ್ಯಾಲ ಭೇಟಿಗೆ ಬಂದಿದ್ದ ಬಾಬು ಆರ್.ಕೆ.ಯ ಫಂಕ್ಷನ್ ಹಾಲ್ ನಲ್ಲಿ ತಂಗಿದ್ದರು. ಡಿಐಜಿ ರಘುರಾಮಿ ರೆಡ್ಡಿ, ಜಿಲ್ಲಾ ಎಸ್ಪಿ ರಘುವೀರಾ ರೆಡ್ಡಿ ಇತರ ಪೊಲೀಸ್ ಅಧಿಕಾರಿಗಳೊಂದಿಗೆ ಶುಕ್ರವಾರ ರಾತ್ರಿ ಅವರು ತಂಗಿದ್ದ ಸ್ಥಳಕ್ಕೆ ಬಂದು, ಅಂತಿಮವಾಗಿ ಟಿಡಿಪಿ ನಾಯಕನನ್ನು ಅರೆಸ್ಟ್‌ ಮಾಡಿ ಅಲ್ಲಿಂದ ಕರೆದೊಯ್ಯಲಾಯಿತು.

ಚಂದ್ರಬಾಬು ಬಂಧನ ವಿಚಾರ ತಿಳಿಯುತ್ತಿದ್ದಂತೆಯೇ ಟಿಡಿಪಿ ಕಾರ್ಯಕರ್ತರು ಆರ್‌ಕೆ ಫಂಕ್ಷನ್ ಹಾಲ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ, ಪ್ರತಿಭಟನೆ ನಡೆಸಿದರು. ಈ ವೇಳೆ ಭೂಮಾ ಬ್ರಹ್ಮಾನಂದ ರೆಡ್ಡಿ, ಭೂಮಾ ಅಖಿಲಪ್ರಿಯ, ಜಗತ್ ವಿಖ್ಯಾತ್ ರೆಡ್ಡಿ, ಎವಿ ಸುಬ್ಬಾರ್ ರೆಡ್ಡಿ, ಬಿ.ಸಿ.ಜನಾರ್ದನ್ ರೆಡ್ಡಿ ಸೇರಿದಂತೆ ಸ್ಥಳೀಯ ಟಿಡಿಪಿ ಮುಖಂಡರನ್ನು ಬಂಧಿಸಲಾಗಿದೆ. ಫಂಕ್ಷನ್ ಹಾಲ್ ಬಳಿ ಇದ್ದ ಟಿಡಿಪಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ಕರೆದೊಯ್ದರು.

ಏನಿದು ಹಗರಣ?

2015 ರಲ್ಲಿ, ಕೌಶಲ್ಯ ಅಭಿವೃದ್ಧಿ ಯೋಜನೆಗೆ ಟಿಡಿಪಿ ಸರ್ಕಾರವು ಸೀಮೆನ್ಸ್ ಮತ್ತು ಡಿಸೈನ್ ಟೆಕ್ ಕಂಪನಿಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತು. ಈ ಯೋಜನೆಯ ಒಟ್ಟು ವೆಚ್ಚ 3,356 ಕೋಟಿ ರೂಪಾಯಿಗಳು ಮತ್ತು ರಾಜ್ಯ ಸರ್ಕಾರದ ಪಾಲು ಪ್ರತಿಶತ 10 ಅಂದರೆ 371 ಕೋಟಿ ರೂ.ಗಳನ್ನು ಬೇರೆಡೆಗೆ ತಿರುಗಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ… ವೈಪಿಸಿ ಸರ್ಕಾರ 2020ರ ಆಗಸ್ಟ್‌ನಲ್ಲಿ ತನಿಖೆಗೆ ಆದೇಶಿಸಿತ್ತು. ಸಚಿವರ ಉಪ ಸಮಿತಿಯೊಂದಿಗೆ ವಿಚಾರಣೆ ನಡೆಸಲಾಗಿದೆ. 10ನೇ ಡಿಸೆಂಬರ್ 2020 ರಂದು ವಿಜಿಲೆನ್ಸ್ ವಿಚಾರಣೆ ನಡೆಸಲಾಯಿತು. ಎಸಿಬಿ ಫೆಬ್ರವರಿ 9, 2021 ರಂದು ತನಿಖೆಯನ್ನು ಪ್ರಾರಂಭಿಸಿತು. 9 ಡಿಸೆಂಬರ್ 2021 ರಂದು ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!