ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಂಧ್ರಪ್ರದೇಶ ವಿಧಾನಸಭೆ ಅಧಿವೇಶನ ಎರಡನೇ ದಿನವೂ ಗಲಾಟೆಯಿಂದ ಕೂಡಿತ್ತು. ಚಂದ್ರಬಾಬು ಬಂಧನದ ಕುರಿತು ಚರ್ಚೆ ನಡೆಸುವಂತೆ ಒತ್ತಾಯಿಸಿ ಟಿಡಿಪಿ ಸದಸ್ಯರು ಸಭಾಧ್ಯಕ್ಷರ ವೇದಿಕೆಗೆ ಮುತ್ತಿಗೆ ಹಾಕಿದರು. ಈ ವೇಳೆ ಹಿಂದೂಪುರಂ ಶಾಸಕ ನಂದಮೂರಿ ಬಾಲಕೃಷ್ಣ ಸದನದಲ್ಲಿ ಸೀಟಿ ಹೊಡೆದು ಪ್ರತಿಭಟನೆ ನಡೆಸಿದರು. ಒಂದೆರಡು ಸಲ ಅಲ್ಲ..ನಿರಂತರವಾಗಿ ಸೀಟಿ ಹೊಡೆದು ಗೊಂದಲ ವಾತಾವರಣ ಸೃಷ್ಟಿಸಿದರು.
ನಿನ್ನೆ ಸದನದಲ್ಲಿ ಬಾಲಕೃಷ್ಣ ಮೀಸೆ ತಿರುವಿ ಸುದ್ದಿಯಾಗಿದ್ದ ಇವರು ಇಂದು ಸಿಳ್ಳೆ ಹೊಡೆದು ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದ್ದಾರೆ. ಬಾಲಕೃಷ್ಣ ಕ್ರಮಕ್ಕೆ ಸಿಟ್ಟಿಗೆದ್ದ ಸಚಿವ ಅಂಬಟಿ ರಾಂಬಾಬು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇದು ನಿಮ್ಮ ಟಿಡಿಪಿ ಕಚೇರಿ ಅಲ್ಲ.. ಗೌರವಾನ್ವಿತ ದೇವಾಲಯ.. ಇಲ್ಲಿ ಶಿಳ್ಳೆ ಹೊಡೆಯುವುದು ಸರಿಯಲ್ಲ. ಎಂದು ಕೆಂಡಾಮಂಡಲರಾದರು.
ಚಂದ್ರಬಾಬು ಬಂಧನ ಕಾನೂನು ಬಾಹಿರವಾಗಿದ್ದು, ಹಗರಣ ಎಂಬುದೇ ಇಲ್ಲ ಎಂದು ಟಿಡಿಪಿ ಟೀಕಿಸುತ್ತಿದೆ.ಸಾಕ್ಷಾಧಾರಗಳಿಲ್ಲದೆ ಬಂಧಿಸುವುದು ತಪ್ಪು ಮತ್ತು ಇದು ಸಿಎಂ ಜಗನ್ ಬಣದ ಕೃತ್ಯ ಎಂದರು.