ರಾಜ್ಯದಲ್ಲಿ ಟಿಪ್ಪು ಸಂತತಿ ಬೆಳೆಸುತ್ತಿರುವವರಿಗೆ ತಕ್ಕ ಪಾಠ ಕಲಿಸಿ: ಕೆ.ಎಸ್.ಈಶ್ವರಪ್ಪ

ಹೊಸದಿಗಂತ ವರದಿ ಮಡಿಕೇರಿ:

ರಾಜ್ಯದಲ್ಲಿ ಟಿಪ್ಪು ಸಂತತಿ ಬೆಳೆಸುತ್ತಿರುವವರಿಗೆ ತಕ್ಕ ಪಾಠ ಕಲಿಸುವಂತೆ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಅವರು ಕರೆ ನೀಡಿದರು. ಗೋಣಿಕೊಪ್ಪದಲ್ಲಿ ಆಯೋಜಿಸಿದ್ದ ವಿಜಯ ಸಂಕಲ್ಪ ಯಾತ್ರೆಯ ಸಮಾವೇಶದಲ್ಲಿ ಅವರು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.

ಮೋದಿ, ಅಮಿತ್ ಶಾ ಬಿಟ್ಟರೆ ಬಿಜೆಪಿಗೆ ನಾಯಕರಿಲ್ಲ, ಭ್ರಷ್ಟಾಚಾರ ಮಿತಿ ಮೀರಿ ಹೋಗಿದೆ. ದೇಶ ಕೋಮುವಾದಿಗಳ ಗಲಭೆಯಿಂದ ತತ್ತರಿಸಿದೆ. ಭಯೋತ್ಪಾದಕ ಚಟುವಟಿಕೆಗಳಿಗೆ ಕಾರಣವಾಗಿದೆ ಎಂಬ ಸುಳ್ಳು ಆರೋಪ ಮಾಡುತ್ತಿರುವ ಸಿದ್ದರಾಮಯ್ಯ ಅವರಿಗೆ ಇಂತಹ ಮಾತು ಹೇಳಲು ಯೋಗ್ಯತೆಯಿಲ್ಲ ಎಂದ ಅವರು, ವಿಶ್ವವೇ ಮೋದಿಯನ್ನು ವಿಶ್ವನಾಯಕ ಎಂದು ಪರಿಗಣಿಸಿದೆ. ಹೀಗಿರುವಾಗ ಮೋದಿ ವಿರುದ್ಧ ಅಪಪ್ರಚಾರದಲ್ಲಿ ಕಾಂಗ್ರೆಸ್ ತೊಡಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪಾಕಿಸ್ತಾನ ಒಬ್ಬಂಟಿಯಾಗಿದೆ. ಜಗತ್ತಿನ ಎಲ್ಲಾ ದೇಶಗಳು ಒಂದಾಗಿವೆ. ಇದು ನರೇಂದ್ರ ಮೋದಿ ಶಕ್ತಿ ಎಂದು ಬಣ್ಣಿಸಿದ ಈಶ್ವರಪ್ಪ, ಉಕ್ಕಿನ ಮನುಷ್ಯ ಅಮಿತ್ ಶಾ ಈಗ ದೇಶದ ಗೖಹ ಮಂತ್ರಿ. ಕಾಶ್ಮೀರದಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಿಸಿದ ಕೀರ್ತಿ ಅಮಿತ್ ಶಾ ಅವರದ್ದಾಗಿದೆ ಎಂದರು.

ಕಾಂಗ್ರೆಸ್ ವಿರುದ್ಧ ಕಟು ಮಾತುಗಳಿಂದ ಕಿಡಿಕಾರಿದ ಈಶ್ವರಪ್ಪ ಅವರು, ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಭಯೋತ್ಪಾದಕರಿಗೆ ಪ್ರೋತ್ಸಾಹ ನೀಡಿದ್ದನ್ನು ಮರೆಯಬೇಡಿ. ಭಾರತ ವೀರರ ದೇಶ ಎಂದು ಜಗತ್ತಿಗೇ ತೋರಿಸಿದ ಹಿರಿಮೆ ಮೋದಿ ನೇತೖತ್ವದ ಬಿಜೆಪಿ ಸರ್ಕಾರದ್ದು ಎಂದು ಹೇಳಿದರು.

ರಾಷ್ಟ್ರಭಕ್ತ ಯುವ ಪೀಳಿಗೆಯಿಂದ ಬಿಜೆಪಿ ಪ್ರಬಲವಾಗಿ ಬೆಳೆಯುತ್ತಿದೆ. ಇವರ ಮೇಲೆ ದೇಶದ ಭವಿಷ್ಯ ನಿಂತಿದೆ. ದೇಶ ಭಕ್ತರ ಜಿಲ್ಲೆಯಾದ ಕೊಡಗಿನ ಹುಲಿ ಮರಿಗಳು ಬಿಜೆಪಿಯ ನಿಜವಾದ ಶಕ್ತಿ ಎಂದ ಅವರು, ದೇಶ ಪ್ರೇಮಿಗಳ ಕೊಡಗು ಜಿಲ್ಲೆ ನನ್ನಂತಹ ನಾಯಕರಿಗೆ ಪ್ರೇರಣೆ ನೀಡಬಲ್ಲದು ಎಂದು ನುಡಿದರು.

ರಾಹುಲ್ ಗಾಂಧಿ ಕಾಶ್ಮೀರಕ್ಕೆ ತೆರಳಿದ ಸಂದರ್ಭ ರಾಹುಲ್ ಭಾರತ್ ಜೋಡೋಗೆ ಮುಕ್ತ ಅವಕಾಶ ನೀಡಿತ್ತು. ಯಾವುದೇ ಭಯೋತ್ಪಾದಕ ಸಮಸ್ಯೆಯಿರಲಿಲ್ಲ. ಇದು ಬಿಜೆಪಿ ಸಾಧನೆಯಲ್ಲವೇ ಎಂದು ಪ್ರಶ್ನಿಸಿದ ಈಶ್ವರಪ್ಪ ಅವರು, ಸೋನಿಯಾ, ರಾಹುಲ್ ಗಾಂಧಿ ಬಿಟ್ಟರೆ ಕಾಂಗ್ರೆಸ್’ನಲ್ಲಿ ಯಾರಿದ್ದಾರೆ. ಎಲ್ಲಾ ಚುನಾವಣೆಗಳಲ್ಲಿಯೂ ಕಾಂಗ್ರೆಸ್ ಧೂಳೀಪಟವಾಗುತ್ತಿದೆ ಎಂದು ಹೇಳಿದರು.

ಕಾಂಗ್ರೆಸ್ ನಾಯಕರು ಪಕ್ಷ ಕಟ್ಟುತ್ತಿಲ್ಲ. ಅಧಿಕಾರ ಚಲಾಯಿಸಲು ಮಾತ್ರ ಬಯಸುತ್ತಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಸಂಪೂರ್ಣ ನಿರ್ನಾಮವಾಗಿದೆ.ಕರ್ನಾಟಕದಲ್ಲೂ ಕಾಂಗ್ರೆಸ್’ಗೆ ದಯನೀಯ ಸ್ಥಿತಿ ಬರಲಿದೆ ಎಂದು ಭವಿಷ್ಯ ನುಡಿದರು

ಯಾವ ಕೊಡುಗೆ ನೀಡಿದ್ದಾರೆ?: ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದಾಗ ಹಿಂದುಳಿದ ಮತ್ತು ದಲಿತ ವರ್ಗಕ್ಕೆ ಅನೇಕ ನೆರವು ನೀಡಿದ್ದಾರೆ. ಸಿದ್ದರಾಮಯ್ಯ ಯಾವ ಕೊಡುಗೆ ನೀಡಿದ್ದಾರೆ ಎಂದು ಪ್ರಶ್ನಿಸಿದ ಈಶ್ವರಪ್ಪ, ಬಿಜೆಪಿಯ ಸವಾಲಿನ ಪ್ರಶ್ನೆಗಳಿಗೆ ಉತ್ತರಿಸಲು ಕಾಂಗ್ರೆಸ್ ಅಶಕ್ತವಾಗಿದೆ ಎಂದು ಟೀಕಿಸಿದರು.
ಈ ಚುನಾವಣೆಯಲ್ಲಿ ಸಿದ್ದರಾಮಯ್ಯ ರಾಜಕೀಯ ಭವಿಷ್ಯ ನಿರ್ನಾಮವಾಗಲಿದೆ. ಸರಿಯಾದ ಕ್ಷೇತ್ರಕ್ಕಾಗಿ ಸಿದ್ದರಾಮಯ್ಯ ಈಗ ಪರದಾಡುತ್ತಿದ್ದಾರೆ. ಬಾದಾಮಿಯಲ್ಲಿ ಠೇವಣಿಯೇ ಸಿಗೋದಿಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಎಲ್ಲಿದ್ದೀರಿ.. ಗೋಣಿಕೊಪ್ಪಲು ಬಿಜೆಪಿ ಸಮಾವೇಶ ನೋಡಲು ಬನ್ನಿ ಎಂದು ಸವಾಲು ಹಾಕಿದ ಈಶ್ವರಪ್ಪ ಸಿದ್ದರಾಮಯ್ಯ ನಾನೂ ಸ್ನೇಹಿತರು. ಬಾಯಿಗೆ ಬಂದಂತೆ ಬೈಯ್ದರೂ ಇಬ್ಬರೂ ಒಟ್ಟಿಗೆ ಊಟ ಮಾಡುತ್ತೇವೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!