ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಟೀಂ ಇಂಡಿಯಾದ ವೇಗದ ಬೌಲರ್ ವರುಣ್ ಆರೋನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.
2011 ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ವರುಣ್, ಭಾರತದ ಪರ 9 ಏಕದಿನ ಮತ್ತು ಅಷ್ಟೇ ಸಂಖ್ಯೆಯ ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು ಒಟ್ಟು 29 ವಿಕೆಟ್ಗಳನ್ನು ಪಡೆದಿದ್ದಾರೆ. ತನ್ನ ವೇಗದ ಬೌಲಿಂಗ್ ಮೂಲಕವೇ ಸಂಚಲನ ಮೂಡಿಸಿದ್ದ ವರುಣ್ ಅವರು ಆಗಾಗ್ಗೆ ಗಾಯಕ್ಕೆ ತುತ್ತಾಗಿ ತಂಡದಿಂದ ಹೊರಗುಳಿಯುತ್ತಿದ್ದರು.
2010-11ರಲ್ಲಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಮೊದಲ ಬಾರಿಗೆ ಎಲ್ಲರ ಗಮನ ಸೆಳೆದಿದ್ದ ವರುಣ್, ಗಂಟೆಗೆ 153 ಕಿಲೋಮೀಟರ್ ವೇಗದಲ್ಲಿ ಚೆಂಡನ್ನು ಎಸೆಯುವ ಮೂಲಕ ಸಂಚಲನ ಮೂಡಿಸಿದ್ದರು. ಹೀಗಾಗಿ ಬೇಗನೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರಾದರೂ ತಂಡದಲ್ಲಿ ಖಾಯಂ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ.
ಟೀಂ ಇಂಡಿಯಾ ಪರ ಒಟ್ಟು 9 ಏಕದಿನ ಪಂದ್ಯಗಳನ್ನು ಆಡಿರುವ ವರುಣ್ ಒಟ್ಟು 11 ವಿಕೆಟ್ ಕಬಳಿಸಿದ್ದರೆ, ಇತ್ತ ಟೆಸ್ಟ್ ಕ್ರಿಕೆಟ್ನಲ್ಲಿಯೂ 9 ಪಂದ್ಯಗಳನ್ನಾಡಿರುವ ಅವರ ಖಾತೆಯಲ್ಲಿ ಒಟ್ಟು 18 ವಿಕೆಟ್ಗಳು ಸೇರಿವೆ. ಆದಾಗ್ಯೂ, ದೇಶೀಯ ಕ್ರಿಕೆಟ್‌ನಲ್ಲಿ ವರುಣ್ ಜಾರ್ಖಂಡ್ ಪರ ಉತ್ತಮ ಪ್ರದರ್ಶನ ನೀಡಿದ್ದಾರೆ.
ವರುಣ್ ಆರೋನ್ ಐಪಿಎಲ್‌ನಲ್ಲಿ ಹಲವು ತಂಡಗಳ ಪರ ಆಡಿದ್ದಾರೆ. 2011 ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಪಾದಾರ್ಪಣೆ ಮಾಡಿದ ಅವರು ಈ ಲೀಗ್‌ನಲ್ಲಿ ಒಟ್ಟು 52 ಪಂದ್ಯಗಳನ್ನಾಡಿದ್ದು 44 ವಿಕೆಟ್ ಕಬಳಿಸಿದ್ದಾರೆ. ಆದರೆ, 2022ರ ನಂತರ ವರುಣ್‌ಗೆ ಐಪಿಎಲ್‌ನಲ್ಲಿ ತನ್ನ ಛಾಪು ಮೂಡಿಸುವ ಅವಕಾಶ ಸಿಗಲಿಲ್ಲ. ಈ ಲೀಗ್‌ನಲ್ಲಿ ಅವರು ರಾಜಸ್ಥಾನ್ ರಾಯಲ್ಸ್, ಗುಜರಾತ್ ಟೈಟಾನ್ಸ್ ಸೇರಿದಂತೆ ಹಲವು ದೊಡ್ಡ ತಂಡಗಳಿಗೆ ಆಡಿದ್ದಾರೆ.