ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಕೊನೆಯ ಕ್ಷಣದಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಿದ್ದು, ಈ ಮೂಲಕ ಟಿ20 ಸರಣಿಯನ್ನು 4-1 ಅಂತರದಲ್ಲಿ ಗೆದ್ದುಕೊಂಡಿತು.
161 ರನ್ ಟಾರ್ಗೆಟ್ ಪಡೆದ ಆಸ್ಟ್ರೇಲಿಯಾಗೆ ಟ್ರಾವಿಸ್ ಹೆಡ್ ಸ್ಪೋಟಕ ಆರಂಭ ನೀಡಿದರು. ಬೌಂಡರಿ ಸಿಕ್ಸರ್ ಆಟದಿಂದ ಮೊದಲ ಎರಡು ಓವರ್ಗಳಲ್ಲಿ 10ರ ಸರಾಸರಿಯಲ್ಲಿ ರನ್ ಗಳಿಸಿದರು. ಆದರೆ ಜೋಶ್ ಫಿಲಿಪ್ ಕೇವಲ 4 ರನ್ ಗಳಿಸಿ ಔಟಾದರು. ಭಾರತ ಆರಂಭಿಕ ಮೇಲುಗೈ ಸಾಧಿಸಿತು. 18 ಎಸೆತದಲ್ಲಿ 28 ರನ್ ಸಿಡಿಸಿದ ಟ್ರಾವಿಸ್ ಹೆಡ್ ವಿಕೆಟ್ ಪತನ ಭಾರತದ ಆತ್ಮವಿಶ್ವಾಸ ಹೆಚ್ಚಿಸಿತು.
ಆ್ಯರೋನ್ ಹಾರ್ಡಿ 6 ರನ್ ಸಿಡಿಸಿ ಔಟಾದರು. ಆದರೆ ಬೆನ್ ಮೆಕ್ಡರ್ಮಾಟ್ ಹಾಫ್ ಸೆಂಚುರಿ ಸಿಡಿಸಿದರು. ಇದರಿಂದ ಪಂದ್ಯ ಆಸಿಸ್ ಪರ ವಾಲಿತು. 17 ರನ್ ಸಿಡಿಸಿದ ಟಿಮ್ ಡೇವಿಡ್ ವಿಕೆಟ್ ಪತನಗೊಂಡಿತು.
ಅಂತಿಮ 24 ಎಸೆತದಲ್ಲಿ ಆಸ್ಟ್ರೇಲಿಯಾ ಗೆಲುವಿಗೆ 37 ರನ್ ಅವಶ್ಯಕತೆ ಇತ್ತು. ಮ್ಯಾಥ್ಯೂ ಶಾರ್ಟ್ ಹಾಗೂ ನಾಯಕ ಮಾಥ್ಯೂ ವೇಡ್ ಹೋರಾಟದಿಂದ ಆಸ್ಟ್ರೇಲಿಯಾ ಪಂದ್ಯದ ಮೇಲೆ ಹಿಡಿತ ಸಾಧಿಸಿತು. 16 ರನ್ ಸಿಡಿಸಿದ ಶಾರ್ಟ್ ವಿಕೆಟ್ ಪತನ ಅಭಿಮಾನಿಗಳ ಸಂಭ್ರಮ ಹೆಚ್ಚಿಸಿತು. ಇದರ ಬೆನ್ನಲ್ಲೇ ಬೆನ್ ಡ್ವಾರ್ಶೂಯಿಸ್ ಔಟಾದರು.
ಅಂತಿಮ 6 ಎಸೆತದಲ್ಲಿ ಆಸಿಸ್ ಗೆಲುವಿಗೆ 10 ರನ್ ಅವಶ್ಯಕತೆ ಇತ್ತು. 22 ರನ್ ಸಿಡಿಸಿದ ವೇಡ್ ವಿಕೆಟ್ ಪತನ ಪಂದ್ಯಕ್ಕೆ ಹೊಸ ತಿರುವು ನೀಡಿತು. ಅದ್ಭುತ ಬೌಲಿಂಗ್ ದಾಳಿ ಸಂಘಟಿಸಿದ ಅರ್ಶದೀಪ್ ಅಂತಿಮ ಓವರ್ನಲ್ಲಿ ಕೇವಲ 3 ರನ್ ನೀಡಿದರು. ಈ ಮೂಲಕ ಭಾರತ 6 ರನ್ ರೋಚಕ ಗೆಲುವು ಕಂಡಿತು.