ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಮುಡಿಗೆ ವರ್ಷದ ಟೆಸ್ಟ್ ಕ್ರಿಕೆಟಿಗ ಕಿರೀಟ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಐಸಿಸಿ, 2024 ರ ವರ್ಷದ ಟೆಸ್ಟ್ ಕ್ರಿಕೆಟಿಗನಾಗಿ ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರನ್ನು ಆಯ್ಕೆ ಮಾಡಿದೆ.

2024 ರಲ್ಲಿ ಸ್ಮರಣೀಯ ಪ್ರದರ್ಶನ ನೀಡಿದ್ದ ಜಸ್ಪ್ರೀತ್ ಬುಮ್ರಾ ವರ್ಷದ ಟೆಸ್ಟ್ ಕ್ರಿಕೆಟಿಗರಾಗಿ ಆಯ್ಕೆಯಾಗಿದ್ದಾರೆ. ಜಸ್ಪ್ರೀತ್ ಬುಮ್ರಾ ಕಳೆದ ವರ್ಷ ಟೆಸ್ಟ್ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು.

ಜಸ್ಪ್ರೀತ್ ಬುಮ್ರಾ ಭಾರತವಲ್ಲದೆ, ವಿದೇಶಿ ಪರಿಸ್ಥಿತಿಗಳಲ್ಲಿಯೂ ಉತ್ತಮವಾಗಿ ಆಡಿದರು. 2023 ರ ಕೊನೆಯಲ್ಲಿ ಬೆನ್ನುನೋವಿನಿಂದ ಚೇತರಿಸಿಕೊಂಡ ನಂತರ ಟೆಸ್ಟ್‌ಗೆ ಮರಳಿದ್ದ ಬುಮ್ರಾ 2024 ರಲ್ಲಿ ಭಾರತದ ಅತ್ಯಂತ ಯಶಸ್ವಿ ಆಟಗಾರರಲ್ಲಿ ಒಬ್ಬರಾಗಿದ್ದರು. ತವರಿನ ಪರಿಸ್ಥಿತಿಯಲ್ಲಿ ಕಳೆದ ವರ್ಷ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಮತ್ತು ಬಾಂಗ್ಲಾದೇಶ ವಿರುದ್ಧ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬುಮ್ರಾ ಮತ್ತೊಂದೆಡೆ, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾದಲ್ಲಿಯೂ ಗಮನಾರ್ಹ ಪ್ರದರ್ಶನ ನೀಡಿದ್ದರು.

ಜಸ್ಪ್ರೀತ್ ಬುಮ್ರಾ 2024 ರಲ್ಲಿ ಒಟ್ಟು 13 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಈ ಅವಧಿಯಲ್ಲಿ ಅವರು 14.92 ಸರಾಸರಿಯಲ್ಲಿ 71 ವಿಕೆಟ್ ಪಡೆದರು. ಈ ಮೂಲಕ ಕಳೆದ ವರ್ಷ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಕೂಡ ಎನಿಸಿಕೊಂಡಿದ್ದರು.

ಇತಿಹಾಸದಲ್ಲಿ ಒಂದು ಕ್ಯಾಲೆಂಡರ್ ವರ್ಷದಲ್ಲಿ 70+ ವಿಕೆಟ್‌ಗಳನ್ನು ಪಡೆದ 17 ಬೌಲರ್‌ಗಳ ಪೈಕಿ ಬುಮ್ರಾ ಮಾತ್ರ ಕಡಿಮೆ ಸರಾಸರಿ ಹೊಂದಿರುವ ಬೌಲರ್ ಎನಿಸಿಕೊಂಡಿದ್ದಾರೆ​. ಇದರ ಜೊತೆಗೆ ಕ್ಯಾಲೆಂಡರ್ ವರ್ಷದಲ್ಲಿ 70+ ಟೆಸ್ಟ್ ವಿಕೆಟ್‌ಗಳನ್ನು ಪಡೆದ ಭಾರತದ ನಾಲ್ಕನೇ ಬೌಲರ್ ಎಂಬ ಹೆಗ್ಗಳಿಕೆಗೂ ಬುಮ್ರಾ ಪಾತ್ರರಾಗಿದ್ದಾರೆ.

ಅನುಭವಿಗಳ ಪಟ್ಟಿಯಲ್ಲಿ ಬುಮ್ರಾ
ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಯನ್ನು ಗೆದ್ದ ಆರನೇ ಭಾರತೀಯ ಜಸ್ಪ್ರೀತ್ ಬುಮ್ರಾ. ಇದಕ್ಕೂ ಮುನ್ನ ರಾಹುಲ್ ದ್ರಾವಿಡ್, ಗೌತಮ್ ಗಂಭೀರ್, ವೀರೇಂದ್ರ ಸೆಹ್ವಾಗ್, ರವಿಚಂದ್ರನ್ ಅಶ್ವಿನ್ ಮತ್ತು ವಿರಾಟ್ ಕೊಹ್ಲಿ ಕೂಡ ಈ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಆದರೆ ಈ ಐವರು ಆಟಗಾರರು ಬ್ಯಾಟ್ಸ್‌ಮನ್​ಗಳಾಗಿದ್ದು, ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟಿಗರಾಗಿ ಆಯ್ಕೆಯಾದ ಭಾರತದ ಮೊದಲ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಜಸ್ಪ್ರೀತ್ ಬುಮ್ರಾ ಪಾತ್ರರಾಗಿದ್ದಾರೆ.

ಸಂತಸ ವ್ಯಕ್ತಪಡಿಸಿದ ಬುಮ್ರಾ
ವರ್ಷದ ಐಸಿಸಿ ಟೆಸ್ಟ್ ಕ್ರಿಕೆಟಿಗರಾಗಿ ಆಯ್ಕೆಯಾದ ನಂತರ ಮಾತನಾಡಿರುವ ಜಸ್ಪ್ರೀತ್ ಬುಮ್ರಾ, ‘ಈ ಸ್ವರೂಪ ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದೆ. ನಾನು ಯಾವಾಗಲೂ ಟೆಸ್ಟ್ ಕ್ರಿಕೆಟ್ ಆಡಲು ಬಯಸುತ್ತೇನೆ. ಕಳೆದ ವರ್ಷ ನನಗೆ ತುಂಬಾ ವಿಶೇಷವಾಗಿತ್ತು. ನಾನು ಸಾಕಷ್ಟು ವಿಷಯಗಳನ್ನು ಕಲಿತಿದ್ದೇನೆ ಮತ್ತು ಪಂದ್ಯಗಳನ್ನೂ ಗೆದ್ದಿದ್ದೇನೆ. ವೈಜಾಗ್‌ನಲ್ಲಿ ಒಲಿ ಪೋಪ್ ಅವರ ವಿಕೆಟ್ ನನ್ನ ಪಾಲಿಗೆ ಅತ್ಯಂತ ವಿಶೇಷವಾಗಿತ್ತು. ಆ ವಿಕೆಟ್ ನಿಂದಾಗಿ ಪಂದ್ಯದ ಗತಿಯೇ ಬದಲಾಗಿತ್ತು. ಈ ಪ್ರಶಸ್ತಿಯನ್ನು ಸ್ವೀಕರಿಸಲು ತುಂಬಾ ಸಂತೋಷವಾಗಿದೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!