ಟೆಕ್‌ ದೈತ್ಯ ಗೂಗಲ್‌ ಭಾರತೀಯ ಹ್ಯಾಕರ್‌ಗಳಿಗೆ 18 ಲಕ್ಷ ರೂ. ಪಾವತಿಸಿದ್ದೇಕೆ ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಟೆಕ್‌ ದೂತ್ಯ ಗೂಗಲ್‌ ಬಗ್ಗೆ ನಿಮಗೆಲ್ಲ ಗೊತ್ತೇ ಇದೆ. ಇಂದು ಇಂಟರ್ನೆಟ್‌ ಜಗತ್ತನ್ನಾಳುತ್ತಿರುವ ದಿಗ್ಗಜ ಕಂಪನಿಗಳಲ್ಲಿ ಗೂಗಲ್‌ ಕೂಡ ಒಂದು. ಈ ಕಂಪನಿ ಭಾರತೀಯ ಮೂಲದ ಇಬ್ಬರು ಹ್ಯಾಕರ್‌ಗಳಿಗೆ ಬರೋಬ್ಬರಿ 18 ಲಕ್ಷ ರೂಪಾಯಿಗಳನ್ನು ಪಾವತಿಸಿದೆ. ಇವರೇನು ಗೂಗಲ್‌ ಉದ್ಯೋಗಿಗಳಲ್ಲ ಬದಲಾಗಿ ಹ್ಯಾಕಿಂಗ್‌ ಕೆಲಸ ಮಾಡುವವರು. ಇವರಿಗೆ ಟೆಕ್‌ ದೈತ್ಯ ಕಂಪನಿ ಗೂಗಲ್‌ ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ಪಾವತಿಸಿದೆ. ಈ ರೀತಿ ಪಾವತಿ ಮಾಡಿರುವುದರ ಹಿಂದೆ ಕಾರಣವೂ ಇದೆ. ಅದೇನು ಅಂದಿರಾ? ಇಲ್ಲಿದೆ ನೋಡಿ.

ಗೂಗಲ್‌ ಕಂಪನಿಯು ಶ್ರೀರಾಮ್ ಕೆಎಲ್ ಮತ್ತು ಶಿವನೇಶ್ ಅಶೋಕ್ ಎಂಬ ಇಬ್ಬರು ಯುವ ಹ್ಯಾಕರ್‌ಗಳಿಗೆ ಬರೋಬ್ಬರಿ 22 ಸಾವಿರ ಡಾಲರ್‌ (18 ಲಕ್ಷ ರೂಪಾಯಿ) ಗಳನ್ನು ಪಾವತಿ ಮಾಡಿದೆ. ಈ ಪಾವತಿ ಮಾಡಿರುವುದರ ಹಿಂದಿನ ಕಾರಣವೇನೆಂದರೆ ಅವರು ಗೂಗಲ್‌ ನ ತಂತ್ರಜ್ಞಾನದಲ್ಲಿದ್ದ ದೋಷವೊಂದನ್ನು ಕಂಡುಹಿಡಿದಿದ್ದು. ಹೌದು, ಈ ಹ್ಯಾಕರ್‌ಗಳು ಗೂಗಲ್‌ನ ಕ್ಲೌಡ್ ಪ್ರೋಗ್ರಾಂ ಪ್ರಾಜೆಕ್ಟ್‌ಗಳಲ್ಲಿ ಭದ್ರತಾ ದೋಷವನ್ನು ಹುಡುಕಿಕೊಟ್ಟಿದ್ದಾರೆ. ಈ ಕಾರಣಕ್ಕೆ ಗೂಗಲ್‌ ಇವರಿಗೆ ಬಹುಮಾನದ ರೂಪದಲ್ಲಿ ಈ ಹಣವನ್ನು ನೀಡಿದೆ.

ತನ್ನ ಗ್ರಾಹಕರಿಗೆ ಅತ್ಯಂತ ಸುರಕ್ಷಿತ ಸೇವೆ ನೀಡಲು ಗೂಗಲ್‌ ಯಾವಾಗಲೂ ಹೆಚ್ಚಿನ ಗಮನ ವಹಿಸುತ್ತವೆ. ಗೂಗಲ್‌ ಮಾತ್ರವಲ್ಲ, ಫೇಸ್ಬುಕ್‌, ಮೈಕ್ರೋಸಾಫ್ಟ್‌ ನಂತಹ ದೊಡ್ಡ ದೊಡ್ಡ ಕಂಪನಿಗಳು ಸುರಕ್ಷಿತ ಸೇವೆಗಳನ್ನು ನೀಡಲು ಹೆಚ್ಚಿನ ಹಣ ವ್ಯಯಿಸುತ್ತವೆ. ಆದರೂ ಕೆಲವೊಮ್ಮೆ ತಾಂತ್ರಿಕ ದೋಷಗಳು, ಭದ್ರತಾ ಲೋಪಗಳು ಅಥವಾ ಬಗ್‌ ಗಳು ಪತ್ತೆಯಾಗುತ್ತವೆ. ಈ ಥರದ ಲೋಪಗಳನ್ನು ಖದೀಮರು ದುರುಪಯೋಗಪಡಿಸಿಕೊಳ್ಳುತ್ತಾರೆ. ಹಾಗಾಗೀ ಈ ಥರದ ಲೋಪಗಳನ್ನು ಅಥವಾ ಬಗ್‌ ಗಳನ್ನು ಪತ್ತೆ ಹಚ್ಚಿದವರಿಗೆ ಬೌಂಟಿ ರೂಪದಲ್ಲಿ ಬಹುಮಾನಗಳನ್ನು ಘೋಷಿಸಲಾಗಿರುತ್ತದೆ. ಪ್ರಸ್ತುತ ಈ ಭಾರತೀಯ ಹ್ಯಾಕರ್‌ಗಳು ಈ ಥರದ ಲೋಪವನ್ನು ಕಂಡು ಹಿಡಿದ ಕಾರಣಕ್ಕೆ ಗೂಗಲ್‌ ಅವರಿಗೆ ಬಹುಮಾನ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!