ತಾಂತ್ರಿಕ ಕೇಂದ್ರವನ್ನಾಗಿ ಉನ್ನತೀಕರಿಸಿದ ಐ.ಟಿ.ಐ. ಕಾಲೇಜು ಕಟ್ಟಡ ಉದ್ಘಾಟನೆ

ಹೊಸದಿಗಂತ ವರದಿ, ಚಿತ್ರದುರ್ಗ:

ತಾಂತ್ರಿಕ ಕೇಂದ್ರವಾಗಿ ಉನ್ನತೀಕರಿಸಲಾಗಿರುವ ಚಿತ್ರದುರ್ಗ ಐ.ಟಿ.ಐ. ಕಾಲೇಜಿನ ಕಟ್ಟಡದ ಲೋಕಾರ್ಪಣೆಯನ್ನು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಸೋಮವಾರ ನೆರವೇರಿಸಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬೆಂಗಳೂರಿನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ವರ್ಚುಯಲ್ ಆಗಿ ರಾಜ್ಯದ 150 ಐ.ಟಿ.ಐ. ತಂತ್ರಜ್ಞಾನ ಕೇಂದ್ರಗಳನ್ನು ಉದ್ಘಾಟಿಸಿದರು. ಸಾಂಪ್ರದಾಯಿಕ ಐ.ಟಿ.ಐ ಕೋರ್ಸ್‌ಗಳನ್ನು ಹೊರತುಪಡಿಸಿ, ಆತ್ಯಾಧುನಿಕ ತಂತ್ರಜ್ಞಾನ ವಲಯದ ನವೀನ ಕೋರ್ಸ್‌ಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಅನುಕೂಲವಾಗುವಂತೆ ರಾಜ್ಯ ಸರ್ಕಾರ ಟಾಟಾ ಟೆಕ್ನಾಲಜೀಸ್ ಹಾಗೂ ಇತರೆ ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕೋರ್ಸ್‌ಗಳನ್ನು ರೂಪಿಸಿದೆ.
ರಾಜ್ಯ ಸರ್ಕಾರದ ೬೯೦ ಕೋಟಿ, ಟಾಟಾ ಟೆಕ್ನಾಲಜೀಸ್ ಲಿಮಿಟೆಡ್ ಮತ್ತು ಇತರೆ 20 ಉದ್ಯಮಗಳ 4060ಕೋಟಿ ವೆಚ್ಚದಲ್ಲಿ ರಾಜ್ಯದ 150 ಸರ್ಕಾರಿ ತರಬೇತಿ ಕೇಂದ್ರಗಳನ್ನು ತಾಂತ್ರಿಕ ಕೇಂದ್ರಗಳಾಗಿ ಪರಿವರ್ತಿಸಲಾಗಿದೆ. ಚಿತ್ರದುರ್ಗ ಐ.ಟಿ.ಐ ಕಾಲೇಜಿನಲ್ಲಿ 2 ವರ್ಷ ಕಾಲಾವಧಿಯ ಬ್ಯಾಟರಿ ಚಾಲಿತ ವಾಹನ, ಮೂಲಭೂತ ವಿನ್ಯಾಸ ಹಾಗೂ ಕಾರ್ಯತಃ ಪರಿಶೀಲನೆ ಕೋರ್ಸ್‌ಗಳಲ್ಲಿ ತರಬೇತಿ ನೀಡಲಾಗುವುದು. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ತರಬೇತಿಗೆ ಪ್ರವೇಶ ಪಡೆಯಬಹುದಾಗಿದೆ.
ಜಿಲ್ಲೆಯ ಚಿತ್ರದುರ್ಗ, ಹಿರಿಯೂರು, ಭರಮಸಾಗರ, ಚಳ್ಳಕೆರೆ ಹಾಗೂ ಹೊಸದುರ್ಗ ಸರ್ಕಾರಿ ಐ.ಟಿ.ಐ. ಕಾಲೇಜುಗಳು ತಂತ್ರಜ್ಞಾನ ಕೇಂದ್ರಗಳಾಗಿ ಉನ್ನತೀಕರಣಗೊಂಡಿವೆ. ತರಬೇತಿ ಅವಧಿಯಲ್ಲಿ ಅತ್ಯಾಧುನಿಕ ಉಪಕರಣಗಳನ್ನು ಬಳಸಿ ಪ್ರಾಯೋಗಿಕ ತರಬೇತಿ ನೀಡಲಾಗುವುದು. ತರಬೇತಿ ಹೊಂದಿದ ವಿದ್ಯಾರ್ಥಿಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಹೆಚ್ಚಿನ ಉದ್ಯೋಗ ಅವಕಾಶಗಳು ಲಭಿಸಲಿವೆ.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ, ಜಿ.ಪಂ.ಸಿಇಓ ಡಾ.ನಂದಿನಿದೇವಿ, ಸರ್ಕಾರಿ ಐಟಿಐ ಕಾಲೇಜಿನ ಪ್ರಾಂಶುಪಾಲ ಬಿ.ಸುರೇಶ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಮೂಡಲಗಿರಿಯಪ್ಪ, ಐ.ಟಿ.ಐ ಕಾಲೇಜು ಉಪನ್ಯಾಸಕರು ಸೇರಿದಂತೆ ತರಬೇತಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!