ಕೃಷಿ ಕ್ಷೇತ್ರದಲ್ಲಾಗುತ್ತಿದೆ ತಂತ್ರಜ್ಞಾನ ಕ್ರಾಂತಿ !

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಭಾರತದ ಬೆನ್ನೆಲುಬಾಗಿರೋ ಕೃಷಿ ಕ್ಷೇತ್ರದಲ್ಲೀಗ ತಂತ್ರಜ್ಞಾನ ಬೆಳವಣಿಗೆಗಳದ್ದೇ ಸುದ್ದಿ. ಜಾಗತಿಕವಾಗಿ 5ಜಿ ಯಂತಹ ಸುಧಾರಿತ ಸಂಪರ್ಕ ವ್ಯವಸ್ಥೆ ಜಾರಿಗೆ ಬಂದು, ಜಗತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ದಾಪುಗಾಲಿಡುತ್ತ ಮುಂದುವರೆಯುತ್ತಿದ್ದರೆ ಭಾರತದ ಕೃಷಿಕ್ಷೇತ್ರವೂ ಕೂಡ ಕಾಲಕ್ಕೆ ತಕ್ಕಂತೆ ತಂತ್ರಜ್ಞಾನಾಧಾರಿತ ಸುಧಾರಣೆಗಳನ್ನು ತನ್ನೊಳಗೆ ಅರಗಿಸಿಕೊಳ್ಳುತ್ತ ಮುಂದೆ ಸಾಗುತ್ತಿದೆ.

ಕೂಲಿ ಸಮಸ್ಯೆ, ಕಾಲವನ್ನು ಆಧರಿಸಿದ ಸಮಸ್ಯೆ, ಕೃಷಿ ಕ್ಷೇತ್ರದ ವ್ಯವಸ್ಥಿತ ನಿರ್ವಹಣೆ, ಕೀಟನಾಶಕಗಳ ಸಿಪಂಡಣೆ ಇತ್ಯಾದಿ ಸಮಸ್ಯೆಗಳಿಗೆ ಈಗ ಭಾರತೀಯ ಕೃಷಿಕ್ಷೇತ್ರವು ತಂತ್ರಜ್ಞಾನಾಧಾರಿತ ಪರಿಹಾರ ಮಾರ್ಗಗಳನ್ನು ಹುಡುಕಿಕೊಳ್ಳುತ್ತಿದೆ. ಕೃತಕ ಬುದ್ಧಿಮತ್ತೆ, ಇಂಟರ್ನೆಟ್ ಆಫ್ ಥಿಂಗ್ಸ್, ರೋಬೋಟಿಕ್ಸ್, ಡ್ರೋನ್‌ಗಳು ಸಾರ್ವತ್ರಿಕವಾಗುತ್ತ ಮತ್ತು ಕೈಗೆಟುಕುವ ದರದಲ್ಲಿ ಭಾರತೀಯ ಕೃಷಿಕರಿಗೆ ಹೊಸ ಭರವಸೆಯನ್ನು ನೀಡುತ್ತಿವೆ. ಭಾರತದ ರೈತನೀಗ ಹೊಸ ತಲೆಮಾರಿನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ʼಟೆಕ್ನೋಫಾರ್ಮರ್‌ʼ ಎಂದೆನಿಸಿಕೊಳ್ಳುತ್ತಿದ್ದಾನೆ.

ಕೃಷಿಕ್ಷೇತ್ರದಲ್ಲಿ ಹೊಸ ಬದಲಾವಣೆ ತರಲು, ಭಾರತದಲ್ಲಿ ಹೆಚ್ಚು ಹೆಚ್ಚು ಕೃಷಿ ನವೋದ್ದಿಮೆಗಳು ಹುಟ್ಟಿಕೊಳ್ಳುತ್ತಿವೆ. ಒಂದು ವರದಿಯ ಪ್ರಕಾರ ಬಾರತದಲ್ಲಿ 1,300 ಕೃಷಿ ಸ್ಟಾರ್ಟಪ್‌ ಗಳು ತಲೆ ಎತ್ತಿವೆ. ಇವು ಕೃತಕ ಬುದ್ಧಿಮತ್ತೆ, ಯಾಂತ್ರೀಕರಣ ಮತ್ತು ಇತರ ಅತ್ಯಾಧುನಿಕ ಸಾಧನಗಳನ್ನು ಬಳಸಿಕೊಂಡು ಸಾಂಪ್ರದಾಯಿಕ ರೈತರಿಗೆ ಉತ್ಪನ್ನಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಬೆಳೆಯಲು ಮತ್ತು ಹೆಚ್ಚು ಸುಲಭವಾಗಿ ಮಾರುಕಟ್ಟೆಯನ್ನು ಕಂಡುಕೊಳ್ಳಲು ಸಹಾಯ ಮಾಡುತ್ತಿವೆ. ಇಂದು ಡ್ರೋನ್‌ ಗಳನ್ನು ಬಳಸಿ ಕೀಟನಾಶಕಗಳನ್ನು ಸಿಂಪಡಿಸುವ ವಿಧಾನಗಳು ಭಾರತದಲ್ಲಿ ಚಾಲ್ತಿಗೆ ಬರುತ್ತಿವೆ. ಬೆಳೆಗಳ ರಕ್ಷಣೆಗೆ ಕೃತಕಬುದ್ಧಿಮತ್ತೆಯನ್ನು ಉಪಯೋಗಿಸಿಕೊಳ್ಳುವ ಪ್ರಯೋಗಗಳು ಯಶಸ್ವಿಯಾಗುತ್ತಿವೆ.

ಕೃಷಿಕರನ್ನು ಸಶಕ್ತಗೊಳಿಸಲು ಡ್ರೋನ್ ಇಮೇಜಿಂಗ್, ರಿಮೋಟ್ ಸೆನ್ಸಿಂಗ್ ಮತ್ತು ಡೇಟಾ ಅನಾಲಿಟಿಕ್ಸ್‌ ಗಳನ್ನು ಬಳಸಿಕೊಂಡು ಕೃಷಿ ನಿರ್ವಹಣೆ ಮಾಡಲು ಅನೇಕ ಸ್ಟಾರ್ಟಪ್‌ ಗಳು ಸಂಶೋಧನೆ ನಡೆಸುತ್ತಿವೆ. ಡ್ರೋನ್‌ನಲ್ಲಿ ಅಳವಡಿಸಲಾಗಿರುವ ಮಲ್ಟಿಸ್ಪೆಕ್ಟ್ರಲ್ ಕ್ಯಾಮೆರಾಗಳನ್ನು ಬಳಸಿ ಬೆಳೆಗಳ ಗುಣಮಟ್ಟವನ್ನು ಪರೀಕ್ಷಿಸುವ ಕುರಿತು ಚಿಂತಿಸಲಾಗುತ್ತಿದೆ. ಅಲ್ಲದೇ ಥರ್ಮಲ್‌ ಇಮಾಜಿಂಗ್‌ ಗಳನ್ನು ಬಳಸಿ ಕೀಟಗಳು, ರೋಗಗಳು, ಪೋಷಕಾಂಶಗಳ ಕೊರತೆ ಮತ್ತು ತೇವಾಂಶದ ಒತ್ತಡದ ಪ್ರದೇಶಗಳನ್ನು ಗುರುತಿಸುವ ಕುರಿತೂ ಸಂಶೋಧನೆಗಳಾಗಿವೆ.

ಇದಲ್ಲದೇ ತಂತ್ರಜ್ಞಾನ ಆಧರಿತ ಡಾರ್ಕ್‌ ಸ್ಟೋರ್‌ ಗಳನ್ನು ಕೆಲವು ನವೋದ್ದಿಮೆಗಳು ಒದಗಿಸುತ್ತಿವೆ. ಇವು ಕೃಷಿಕರಿಗೆ ಸಂಗ್ರಹಣಾ ವ್ಯವಸ್ಥೆ ಹಾಗು ತ್ವರಿತ ಪೂರೈಕೆ ವ್ಯವಸ್ಥೆಗೆ ಸಹಾಯಕವಾಗಲಿವೆ. ಇವುಗಳ ನಿರ್ವಹಣೆಗೆಂದೇ ವಿಶೇಷ ಅಪ್ಲಿಕೇಷನ್‌ ಗಳನ್ನೂ ಅಭಿವೃದ್ಧಿ ಪಡಿಸಲಾಗಿದೆ. ಅಲ್ಲದೇ ಅಂತರಾಷ್ಟ್ರೀಯ ಮಟ್ಟದ ಮಾರುಕಟ್ಟೆಯೊಂದಿಗೆ ವ್ಯವಹರಿಸಲು ಡಿಜಿಟಲ್‌ ಪ್ಲಾಟ್‌ಫಾರ್ಮ್‌ ಗಳನ್ನೂ ಕೆಲ ನವೋದ್ದಿಮೆಗಳು ಒದಗಿಸುತ್ತಿವೆ.

ರೈತರು ಇಂದು ಚಾಲಕ ರಹಿತ ರೊಬೊಟಿಕ್ ಟ್ರಾಕ್ಟರ್ ಬಳಸಿ ಮಣ್ಣಿನ ಉಳುಮೆ ಮಾಡಲು, ಬೀಜಗಳನ್ನು ಬಿತ್ತಲು ಮತ್ತು ಬೆಳೆಗಳನ್ನು ಕೊಯ್ಲು ಮಾಡಲು ಸಮರ್ಥರಾಗಿದ್ದಾರೆ. ಚಾಲಕರಹಿತ ಟ್ರಾಕ್ಟರ್ ಅನ್ನು ಅಭಿವೃದ್ಧಿಪಡಿಸುವಲ್ಲಿ ಭಾರತೀಯ ಕಂಪನಿಗಳು ವಿಶ್ವದಲ್ಲೇ ಮುಂಚೂಣಿಯಲ್ಲಿದ್ದಾರೆ ಮಹೀಂದ್ರಾ ಗ್ರೂಪ್ ತನ್ನ ಚಾಲಕ ರಹಿತ ಆವೃತ್ತಿಯನ್ನು 2018 ರಲ್ಲಿ ಅನಾವರಣಗೊಳಿಸಿತು. ರೈತರು ನೆರಳಿನಲ್ಲಿ ಕುಳಿತು ಟ್ರಾಕ್ಟರ್ ಮತ್ತು ಅದರ ಉಳುಮೆ ಪ್ರಕ್ರಿಯೆಯನ್ನ ಟ್ಯಾಬ್ಲೆಟ್ ಅಥವಾ ಕಂಪ್ಯೂಟರ್‌ನಿಂದ ನಿಯಂತ್ರಿಸಬಹುದು. ಟ್ರಾಕ್ಟರ್ ಪಕ್ಕದ ಹೊಲಕ್ಕೆ ಹೋಗದಂತೆ ಜಿಪಿಎಸ್ ಬಳಸಿ ಜಿಯೋಫೆನ್ಸಿಂಗ್‌ (ಬೇಲಿ) ಗಳನ್ನೂ ಅಳವಡಿಸಬಹುದಾಗಿದೆ.

ಹೀಗೆ ಭಾರತದ ಕೃಷಿ ಕ್ಷೇತ್ರವು ತಂತ್ರಜ್ಞಾನ ಕ್ರಾಂತಿಗೆ ಒಳಪಟ್ಟು ಜಾಗತಿಕವಾಗಿ ಹೆಜ್ಜೆಗುರುತು ಮೂಡಿಸುತ್ತ ಮುನ್ನುಗ್ಗುತ್ತಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!