ಹೊಸದಿಗಂತ ವರದಿ,ಮಂಗಳೂರು:
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ಮತ್ತು ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ದಂಪತಿ,ಕರಾವಳಿ ಜಿಲ್ಲೆಯ ವಿವಿಧ ದೇಗುಲಗಳಿಗೆ ಭೇಟಿ ನೀಡಿದರು.
ಇಂದು ಉಡುಪಿ ಶ್ರೀ ಕೃಷ್ಣ ಮಠ, ಹೊರನಾಡು ಅನ್ನಪೂರ್ಣೇಶ್ವರಿ, ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಸೇರಿದಂತೆ ಅನೇಕ ಕಡೆ ಭೇಟಿ ನೀಡಿದ್ದು, ಸಂಜೆ ದೆಹಲಿಗೆ ಹೊರಡುವ ಮುನ್ನ ಕಾಪು ಮಾರಿಯಮ್ಮನ ದರುಶನ ಪಡೆದರು.
ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರ ಸಮ್ಮುಖದಲ್ಲಿ ದಂಪತಿಗಳಿಗೆ ಅಮ್ಮನ ಅನುಗ್ರಹ ಪ್ರಸಾದವನ್ನು ದೇವಳದ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯಾ ಅವರು ನೀಡಿದರು.
ತೇಜಸ್ವಿ ಸೂರ್ಯ ಅವರ ಪತ್ನಿ ಶಿವಶ್ರೀ ದುರ್ಗಾ ಸ್ತುತಿಯನ್ನು ಹಾಡಿದರು.
ದೇವಳದ ಶಿಲ್ಪಕಲೆಯ ಕೆತ್ತನೆಯ ವೈಭವವನ್ನು ಕಂಡು ಆಶ್ಚರ್ಯಚಕಿತರಾಗಿ ಶ್ಲಾಘನೆಯನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯಾ, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಮಾಧವ ಆರ್. ಪಾಲನ್, ಕಚೇರಿ ನಿರ್ವಹಣಾ ಸಮಿತಿಯ ಮುಖ್ಯ ಸಂಚಾಲಕ ಸುನಿಲ್ ಎಸ್. ಪೂಜಾರಿ, ನವದುರ್ಗಾ ಲೇಖನ ಯಜ್ಞ ಸಮಿತಿಯ ಮಹಿಳಾ ವಿಭಾಗದ ಅಧ್ಯಕ್ಷೆ ಗೀತಾಂಜಲಿ ಎಂ. ಸುವರ್ಣ, ಕಾರ್ಯಾಧ್ಯಕ್ಷೆ ಸಾವಿತ್ರಿ ಗಣೇಶ್, ಆರ್ಥಿಕ ಸಮಿತಿಯ ಕಾತ್ಯಾಯಿನಿ ತಂಡದ ಸಂಚಾಲಕಿ ಅನಿತಾ ಹೆಗ್ಡೆ, ದೇವಳದ ಪ್ರಬಂಧಕ ಗೋವರ್ಧನ್ ಸೇರಿಗಾರ್, ಸಿಬ್ಬಂದಿ ಲಕ್ಷ್ಮಣ್ ಶೆಟ್ಟಿ ಮಂಡೇಡಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕಟೀಲು ಶ್ರೀ ಕ್ಷೇತ್ರಕ್ಕೂ ಭೇಟಿ
ತೇಜಸ್ವೀ ಸೂರ್ಯ ಹಾಗೂ ಪತ್ನಿ ಶಿವಶ್ರೀ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವರ ದರುಶನ ಪಡೆದು , ಅನ್ನಪ್ರಸಾದ ಸ್ವೀಕರಿಸಿದರು.
ದುರ್ಗೆಯ ಮುಂದೆ ತೇಜಸ್ವೀ ಸೂರ್ಯ ದುರ್ಗಾ ಸೂಕ್ತ ಪಠಿಸಿದರು. ನವದಂಪತಿಗಳಿಗೆ ಲಕ್ಷೀನಾರಾಯಣ ಆಸ್ರಣ್ಣ ದೇವರ ಶೇಷವಸ್ತ್ರ, ಪ್ರಸಾದ ನೀಡಿದರು. ಬಳಿಕ ಮೂಲ ಕುದುರುಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಕಟೀಲು ದೇಗುಲಕ್ಕೆ ಬಂದ ಭಕ್ತರನೇಕರು, ತೇಜಸ್ವ ಸೂರ್ಯ ಅವರನ್ನು ಅಭಿನಂದಿಸಿ, ಮಾತಾಡಿಸಿ ಸಂಭ್ರಮಿಸಿದರು.