ಹೊಸದಿಗಂತ ಡಿಜಿಟಲ್ ಡೆಸ್ಕ್ :
ಅಮೆರಿಕದ ಪಾಡ್‌ಕ್ಯಾಸ್ಟರ್, ಕಂಪ್ಯೂಟರ್ ವಿಜ್ಞಾನಿ ಲೆಕ್ಸ್ ಫ್ರಿಡ್‌ಮನ್ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಮೋದಿ ರಷ್ಯಾ-ಉಕ್ರೇನ್ ಯುದ್ಧದ ಜತೆಗೆ ವಿವಿಧ ವಿಚಾರಗಳ ಬಗ್ಗೆ ಮಾತನಾಡಿದರು.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಇದು ಯುದ್ಧದ ಸಮಯವಲ್ಲ ಎಂದ ಮೋದಿ , .ಯುದ್ಧಭೂಮಿಯ ವಿಜಯಗಳು ಯಾವುದೇ ಸಮಸ್ಯೆಗೆ ಶಾಶ್ವತ ಪರಿಹಾರವಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿ ಝೆಲೆನ್ಸ್ಕ ಸಲಹೆ ನೀಡಿದರು.
ನಾನು ರಷ್ಯಾ ಅಧ್ಯಕ್ಷ ಪುಟಿನ್ ಅವರ ಜತೆ ಕುಳಿತು ಇದು ಯುದ್ಧದ ಸಮಯವಲ್ಲ ಎಂದು ಹೇಳಬಲ್ಲೆ. ಅದೇ ರೀತಿ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಬಳಿ ಆತ್ಮೀಯವಾಗಿ, ಸಹೋದರ, ಜಗತ್ತಿನಲ್ಲಿ ಎಷ್ಟು ಜನರು ನಿಮ್ಮೊಂದಿಗೆ ನಿಂತರೂ ಯುದ್ಧಭೂಮಿಯಲ್ಲಿ ಎಂದಿಗೂ ಸಮಸ್ಯೆಗೆ ಪರಿಹಾರ ದೊರೆಯುವುದಿಲ್ಲ ಎಂದು ಸಲಹೆ ನೀಡಬಲ್ಲೆʼ ಎಂದು ತಿಳಿಸಿದರು.
ಉಕ್ರೇನ್ ತನ್ನ ಮಿತ್ರರಾಷ್ಟ್ರಗಳೊಂದಿಗೆ ಸಾಕಷ್ಟು ಚರ್ಚೆಗಳನ್ನು ನಡೆಸಬಹುದು. ಆದರೆ ಅದು ಯಾವುದೇ ಫಲವನ್ನು ನೀಡುವುದಿಲ್ಲ. ಬದಲಿಗೆ ಚರ್ಚೆಗಳು ಎರಡೂ ಕಡೆಯವರನ್ನು ಒಳಗೊಂಡಿರಬೇಕು ಎಂದು ಅವರು ಹೇಳಿದರು.
ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಮಾತನಾಡಿದ ಮೋದಿ, ‘ಆರಂಭದಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವುದು ದೊಡ್ಡ ಸವಾಲಾಗಿತ್ತು. ಆದರೆ ಈಗಿನ ಪರಿಸ್ಥಿತಿಯು ಉಕ್ರೇನ್ ಮತ್ತು ರಷ್ಯಾ ನಡುವೆ ಅರ್ಥಪೂರ್ಣ ಮಾತುಕತೆಗಳಿಗೆ ಅವಕಾಶವನ್ನು ಒದಗಿಸುವಂತಿದೆʼ ಎಂದರು.
ಈ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಗ್ಗೆಯೂ ಮಾತನಾಡಿದ ಮೋದಿ , ಧೈರ್ಯದಿಂದ ಮುನ್ನುಗ್ಗುವ ಛಲ, ತಮ್ಮದೇ ನಿರ್ಧಾರರ ತೆಗೆದುಕೊಳ್ಳುವ ಸಾಮರ್ಥ್ಯ, ಅಮೆರಿಕವೇ ಮೊದಲು ಎನ್ನುವ ಧೋರಣೆ-ಮುಂತಾದ ಟ್ರಂಪ್ ಅವರ ಗುಣಗಳು ತಮ್ಮ ಗಮನ ಸೆಳೆದಿರುವುದಾಗಿ ತಿಳಿಸಿದರು.
ಅಮೆರಿಕದ ಹೂಸ್ಟನ್‌ನಲ್ಲಿ 2019ರಲ್ಲಿ ನಾವು ಹೂಸ್ಟನ್‌ನಲ್ಲಿ ಹೌಡಿ ಮೋದಿ ಕಾರ್ಯಕ್ರಮ ನಡೆಸಿದ್ದೆವು. ಅಧ್ಯಕ್ಷ ಟ್ರಂಪ್ ಮತ್ತು ನಾನು ಅಲ್ಲಿದ್ದೆವು. ಇಡೀ ಕ್ರೀಡಾಂಗಣವು ಸಂಪೂರ್ಣವಾಗಿ ತುಂಬಿತ್ತು. ರಾಜಕೀಯ ಕಾರ್ಯಕ್ರಮಕ್ಕೆ ಅಷ್ಟೊಂದು ಜನ ಆಗಮಿಸಿದ್ದು ನೋಡಿ ಅಚ್ಚರಿಯಾಗಿತ್ತು ಎಂದು ಮೋದಿ ಅಂದಿನ ದಿನಗಳನ್ನು ಮೆಲುಕು ಹಾಕಿದರು.
ಭಾರತೀಯ ವಲಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಟ್ರಂಪ್ ತಮ್ಮ ಭಾಷಣ ಮುಗಿಸಿ ಕೆಳಗೆ ಕುಳಿತು ನನ್ನ ಭಾಷಣವನ್ನು ಕೇಳುತ್ತಿದ್ದರು. ಅದು ಅವರ ನಮ್ರತೆ. ಭಾಷಣವನ್ನು ಮುಗಿಸಿದ ಬಳಿಕ ಟ್ರಂಪ್ ಅವರಿಗೆ ಧನ್ಯವಾದ ತಿಳಿಸಲು ಕೆಳಗಿಳಿದು ಬಂದಿದ್ದೆ. ಬಳಿಕ ಅವರು ನನ್ನೊಂದಿಗೆ ಮೈದಾನದ ಸುತ್ತಲೂ ಹೆಜ್ಜೆ ಹಾಕಿದರು. ಆ ಕ್ಷಣವು ನಿಜವಾಗಿಯೂ ಹೃದಯಸ್ಪರ್ಶಿಯಾಗಿತ್ತು ಎಂದು ತಿಳಿಸಿದರು.