ಹೊಸದಿಗಂತ ವರದಿ, ಸುಂಟಿಕೊಪ್ಪ(ಕೊಡಗು)
ಚಾಲಕನ ನಿಯಂತ್ರಣ ಕಳೆದುಕೊಂಡ ಟೆಂಪೋ ಎರಡು ವಿದ್ಯುತ್ ಕಂಬಗಳಿಗೆ ಅಪ್ಪಳಿಸಿ ಮಗುಚಿರುವ ಘಟನೆ ಮಂಗಳವಾರ ಬೆಳಗಿನ ಜಾವ ನಡೆದಿದೆ.
ಅದೃಷ್ಟವಶಾತ್ ಟೆಂಪೋದಲ್ಲಿದ್ದವರು ಹಾಗೂ ರಸ್ತೆ ಬದಿಯ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೈಸೂರಿನಿಂದ ಮೂಡಬಿದರೆಗೆ ತೆರಳುತ್ತಿದ್ದ ಟೆಂಪೋ ಚಾಲಕ ಬೆಳಗಿನ ಜಾವ ನಿದ್ದೆಯ ಮಂಪರಿಗೆ ಜಾರಿದ್ದನೆನ್ನಲಾಗಿದ್ದು, ಪರಿಣಾಮವಾಗಿ ನಿಯಂತ್ರಣ ಕಳೆದುಕೊಂಡ ಟೆಂಪೋ, ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಪತ್ರಕರ್ತ ಎಂ.ಬಿ. ವಿನ್ಸೆಂಟ್ ಎಂಬವರ ಮನೆ ಸಮೀಪದ ವಿದ್ಯುತ್ ಕಂಬಕ್ಕೆ ಅಪ್ಪಳಿಸಿ ಮುನ್ನುಗಿದೆ. ನಂತರ ಮನೆ ಮುಂಭಾಗದ ಮತ್ತೊಂದು ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.
ವಿದ್ಯುತ್ ಕಂಬಗಳಿಗೆ ಡಿಕ್ಕಿಯಾಗದೆ ಟೆಂಪೋ ಮುನ್ನುಗ್ಗಿದ್ದಿದ್ದರೆ ಮನೆಗೆ ಹಾನಿಯಾಗುವುದರೊಂದಿಗೆ ಮನೆಮಂದಿಗೂ ಅಪಾಯ ಸಂಭವಿಸುವ ಸಾಧ್ಯತೆ ಇತ್ತೆನ್ನಲಾಗಿದೆ.
ಅದೃಷ್ಟವಶಾತ್ ಮನೆಯವರು ಸುರಕ್ಷಿತವಾಗಿದ್ದು, ಟೆಂಪೋದಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ