ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರ ಪ್ರಾಸಿಕ್ಯೂಷನ್‌ಗೆ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ಸೆ.9ಕ್ಕೆ ಮುಂದೂಡಿದೆ.
ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ಕ್ರಮ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನ ನ್ಯಾಯಮೂರ್ತಿ ನಾಗಪ್ರಸನ್ನ ಅವರನ್ನೊಳಗೊಂಡ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು. ಇಂದು ದೂರುದಾರರ ಪರವಾಗಿ ಹಿರಿಯ ವಕೀಲ ಕೆ.ಜಿ ರಾಘವನ್ ತಮ್ಮ ವಾದವನ್ನು ನ್ಯಾಯಪೀಠದ ಮುಂದಿಟ್ಟರು.
ನಾನು ಕಾನೂನು, ವಾಸ್ತವಾಂಶದ ಪ್ರಶ್ನೆಗಳ ಬಗ್ಗೆ ವಾದಿಸುತ್ತೇನೆ. ವಾಕ್ಚಾತುರ್ಯ ಮತ್ತು ವ್ಯಂಗ್ಯದಿಂದ ವಾದಿಸಲು ಬಯಸುವುದಿಲ್ಲ. ಭ್ರಟಾಚಾರ ತಡೆ ಕಾಯ್ದೆ ಸೆಕ್ಷನ್.17ಎ ಆಧರಿಸಿ ವಾದಿಸುತ್ತೇನೆ ಎಂಬುದಾಗಿ ನ್ಯಾಯಪೀಠಕ್ಕೆ ತಿಳಿಸಿದರು.
ಸೆಕ್ಷನ್.7ಸಿ ಓದಲು ಬಯಸುತ್ತೇನೆ. ಅನಗತ್ಯ ಲಾಭ, ಅನುಕೂಲ ಪಡೆಯುವುದು ಕೂಡ ಕಾಯ್ದೆಯ ವ್ಯಾಪ್ತಿಯಲ್ಲಿದೆ. ಭ್ರಷ್ಟಾಚಾರ ತಡೆ ಕಾಯ್ದೆ ಉಲ್ಲೇಖಿಸಿ ಹಿರಿಯ ವಕೀಲ ಕೆ.ಜಿ ರಾಘವನ್ ವಾದವನ್ನು ಹೈಕೋರ್ಟ್ ನ್ಯಾಯಪೀಠದ ಮುಂದೆ ಮಂಡಿಸಿದರು.
ಈ ಕೇಸಿಗೆ ಸಂಬಂಧಿಸಿದಂತೆ ಈ ಮಾತು ಹೇಳುತ್ತಿಲ್ಲ. ಅನುಚಿತ ಅನುಕೂಲ ಪಡೆಯಲು ಅಧಿಕಾರಿಗಳ ಮೇಲೆ ಪ್ರಭಾವ ಬಳಸಿದರೇ ಅಪರಾಧವಾಗಲಿದೆ. ಪಡೆಯುವ ಅನುಕೂಲ ಕಾನೂನುಬಾರಿರವಾಗಿಲ್ಲದಿದ್ದರೂ ಅಪರಾಧ ಎಂಬುದಾಗಿ ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠದ ಮುಂದೆ ಸೆಕ್ಷನ್.7ಸಿಯನ್ನು ವಿವರಿಸಿದರು.
ವಾದ ಮುಂದುವರೆಸಿದ ದೂರುದಾರ ಸ್ನೇಹಮಯಿ ಕೃಷ್ಣ ಪರ ಹಿರಿಯ ವಕೀಲ ಕೆ.ಜಿ ರಾಘವನ್ ಅವರು ಯಾವುದೇ ಕಾರಣಕ್ಕೂ ರಾಜ್ಯಪಾಲರು ನೀಡಿರುವಂತ ಪ್ರಾಸಿಕ್ಯೂಷನ್ ಗೆ ತಡೆ ನೀಡಬಾರದು. ಈಗಾಗಲೇ ರಾಜ್ಯ ಸರ್ಕಾರವೇ ಹಗರಣ ನಡೆದಿರುವ ಬಗ್ಗೆ ತನಿಖಾ ಸಮಿತಿಯನ್ನು ರಚನೆ ಮಾಡಿದೆ ಎಂಬುದಾಗಿ ಕೋರಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮುಡಾ ಸೈಟು ಹಂಚಿಕೆಯಲ್ಲಿ ಪ್ರಭಾವ ಬೀರಿದ್ದಾರೆ. 2017ರಲ್ಲಿ ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದರು. ಒಂದು ಸೈಟ್ ಗೂ ಅರ್ಹತೆ ಇಲ್ಲದವರಿಗೆ 14 ಸೈಟು ನೀಡಲಾಗಿದೆ. ಮುಡಾ ಹಗರಣದಲ್ಲಿ ಸಿದ್ಧರಾಮಯ್ಯ ಭಾಗಿಯಾಗಿದ್ದಾರೆ ಎಂಬುದಾಗಿ ವಾದಿಸಿದರು.
ಈ ವೇಳೆ ವಿಚಾರಣೆಯನ್ನು ಮುಂದಿನ ಸೋಮವಾರಕ್ಕೆ ಮುಂದೂಡುವಂತೆ ಎಜಿ ಮನವಿ ಮಾಡಿದರು. ಅಲ್ಲದೇ ಸಚಿವ ಸಂಪುಟದ ನಿರ್ಣಯದ ಬಗ್ಗೆ ವಾದ ಮಂಡಿಸಬೇಕಿದೆ. ಹೀಗಾಗಿ ಒಂದು ವಾರಗಳ ಕಾಲಾವಕಾಶ ನೀಡುವಂತೆ ಕೋರಿದರು. ಈ ವೇಳೆಯಲ್ಲಿ ಹಬ್ಬಕ್ಕೂ ಮೊದಲೇ ವಾದ ಮಂಡಿಸಿ ಮುಗಿಸಿ ಬಿಡಿ ಎಂಬುದಾಗಿ ನ್ಯಾಯಮೂರ್ತಿಗಳು ಸೂಚಿಸಿದರು.
ಎಜಿ ವಾದಿಸಿದ ಮೇಲೆ ನಾನು ವಾದ ಮಂಡಿಸುವುದಾಗಿ ಮುಖ್ಯಮಂತ್ರಿ ಪರ ಅಭಿಷೇಕ್ ಮನು ಸಿಂಘ್ವಿ ತಿಳಿಸಿದರು. ಸೆಪ್ಟೆಂಬರ್ 9 ಅಥವಾ 12ರಂದು ತಾನು ವಾದಿಸುವುದಾಗಿ ಹೇಳಿದರು. ಈ ವಾದ ಪ್ರತಿವಾದವನ್ನು ಆಲಿಸಿದ ಹೈಕೋರ್ಟ್ ನ್ಯಾಯಪೀಟವು ಸೆ.9ಕ್ಕೆ ವಿಚಾರಣೆಯನ್ನು ಮುಂದೂಡಿತು.