ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಡಾ ಹಗರಣ ಕೇಸ್‌ನಲ್ಲಿ ಸಿಎಂ ಪತ್ನಿ ಪಾರ್ವತಿ ಹಾಗೂ ಸಿಎಂ ಅಪ್ತ ಸಚಿವ ಬೈರತಿ ಸುರೇಶ್ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಸಿಎಂ ಪತ್ನಿ ಪಾರ್ವತಿ ಅವರಿಗೆ ಜಾರಿ ನಿರ್ದೇಶನಾಲಯ ನೀಡಿದ್ದ ಸಮನ್ಸ್‌ಗೆ ಹೈಕೋರ್ಟ್ ತಡೆ ನೀಡಿದೆ.
ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠ ಇಡಿ ಸಮನ್ಸ್‌ಗೆ ತಡೆ ನೀಡಿದ್ದು, ಮುಂದಿನ ಆದೇಶದ ವರೆಗೆ ಯಾವುದೇ ವಿಚಾರಣೆ ನಡೆಸದಂತೆ ಸೂಚಿಸಿದೆ. ಪ್ರಕರಣದ ವಿಚಾರಣೆಯನ್ನು ಫೆ.10ಕ್ಕೆ ಮುಂದೂಡಿದೆ.
ಏನಿದು ಕೇಸ್?
ಸಿಎಂ ವಿರುದ್ಧದ ಮುಡಾ ಹಗರಣ ಪ್ರಕರಣದಲ್ಲಿ ಇಡಿ ಮೇಜರ್ ಟ್ವಿಸ್ಟ್ ನೀಡಿತ್ತು. ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ. ಪಾರ್ವತಿ ಹಾಗೂ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿಮಾಡಿತ್ತು. ಇಡಿ ಬೆಂಗಳೂರು ವಲಯ ಕಚೇರಿಯ ಸಹಾಯಕ ನಿರ್ದೇಶಕ ವಿ. ಮುರಳಿಕೃಷ್ಣನ್ ಅವರು ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಇಬ್ಬರಿಗೂ ನೋಟಿಸ್ ಜಾರಿಮಾಡಿದ್ದರು.
ಮಂಗಳವಾರ (ಜ.28) ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದರು. ಪಾರ್ವತಿ ಅವರಿಗೆ ಜನವರಿ 3ರಂದು ಮೊದಲ ನೋಟಿಸ್ ನೀಡಿದ್ದು, ಜ.9ಕ್ಕೆ ಇಡಿ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಪುನಃ ಜನವರಿ 24ರಂದು ಎರಡನೇ ನೋಟಿಸ್ ಜಾರಿಮಾಡಲಾಗಿತ್ತು. ದಾಖಲೆ ಸಂಗ್ರಹದ ಅಗತ್ಯವಿದೆ ಎಂಬ ಕಾರಣ ನೀಡಿ ವಿಚಾರಣೆಗೆ ಹಾಜರಾಗಲು ಕಾಲಾವಕಾಶ ನೀಡುವಂತೆ ಕೋರಿ ಪಾರ್ವತಿ ಅವರು ಇಡಿ ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ವಯಸ್ಸಿನ ಕಾರಣದಿಂದ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡುವಂತೆಯೂ ಕೋರಿದ್ದಾರೆ ಎನ್ನಲಾಗಿತ್ತು.
ಇನ್ನು ಬೈರತಿ ಸುರೇಶ್ ಅವರಿಗೂ ಮುರಳಿಕೃಷ್ಣನ್ ನೋಟಿಸ್ ಜಾರಿಗೊಳಿಸಿದ್ದರು. ಮಗನ ಮದುವೆ ಇರುವ ಕಾರಣ. ಫೆ.6, 7 ರಂದು ವಿಚಾರಣೆಗೆ ಹಾಜರಾಗುವುದಾಗಿ ಬೈರತಿ ಸುರೇಶ್ ಮನವಿ ಮಾಡಿದ್ದರು.
ಇಡಿ ಸಮನ್ಸ್ ಪ್ರಶ್ನಿಸಿ ಸಿಎಂ ಪತ್ನಿ ಹಾಗೂ ಬೈರತಿ ಸುರೇಶ್ ಹೈಕೋರ್ಟ್ ಮೆಟ್ಟಿಲೇರಿದ್ದರು.