ಪಡುಬಿದ್ರಿ- ಬೆಳ್ಮಣ್ -ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ಟೋಲ್ ನಿರ್ಮಾಣ ಆದೇಶಕ್ಕೆ ತಾತ್ಕಾಲಿಕ ತಡೆ

ಹೊಸದಿಗಂತ ವರದಿ ,ಮಂಗಳೂರು:

ಪಡುಬಿದ್ರಿ – ಬೆಳ್ಮಣ್ -ಕಾರ್ಕಳ ರಾಜ್ಯ ಹೆದ್ದಾರಿಯ ಕಂಚಿನಡ್ಕ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಿರುವಂತಹ ಟೋಲ್‌ಗೇಟ್ – ಸುಂಕ ವಸೂಲಾತಿ ಕೇಂದ್ರದ ನಿರ್ಮಾಣದ ಆದೇಶಕ್ಕೆ ತಾತ್ಕಾಲಿಕ ತಡೆಯನ್ನು ತನ್ನ ಆದೇಶದಲ್ಲಿ ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೊರಡಿಸಿದ್ದಾರೆ.

ಟೋಲ್ ಪ್ಲಾಝಾ ನಿರ್ಮಾಣ ಕಾರ್ಯವನ್ನು ಭಾರತೀ ಕನ್ಸಕ್ಷನ್ ಸಂಸ್ಥೆಯ ವತಿಯಿಂದ ಪ್ರಾರಂಭಿಸಲು ಕೆ.ಆರ್.ಡಿ.ಸಿ.ಎಲ್. ಮೂಲಕ ಕಾರ್ಯಾದೇಶವನ್ನು ನೀಡಲಾಗಿರುವುದಾಗಿ, ಆದರೆ, ಸದರಿ ಕಂಚಿನಡ್ಕ ಪ್ರದೇಶವು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ವಾಹನ ದಟ್ಟಣೆ ಇರುವ ರಸ್ತೆಯನ್ನು ಹೊಂದಿದ್ದು, ಈವರೆವಿಗೂ ಡಿವೈಡರ್‌ಗಳ ನಿರ್ಮಾಣವಾಗಲಿ, ಸರ್ವಿಸ ರಸ್ತೆ, ಶೌಚಾಲಯ ನಿರ್ಮಾಣ, ವಿಶ್ರಾಂತಿ ಗೃಹವಾಗಲಿ ನಿರ್ಮಾಣವಾಗಿರುವುದಿಲ್ಲವೆಂದು ಉಲ್ಲೇಕಿಸಿ ಮುಂದುವರೆದಂತೆ, ಈಗಾಗಲೇ ಪಡುಬಿದ್ರಿ ಜಂಕ್ಷನ್‌ನಿಂದ ರಾಜ್ಯ ಹೆದ್ದಾರಿ-66 ರಲ್ಲಿನ ಪಡುಬಿದ್ರಿ ಜಂಕ್ಷನ್‌ನಿಂದ ಮಂಗಳೂರು ಕಡೆಗೆ 5 ಕಿ.ಮೀ. ನಲ್ಲಿರುವ ಹೆಜಮಾಡಿ ಬಳಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಟೋಲ್ ನಿರ್ಮಿಸಿ ಶುಲ್ಕ ಸಂಗ್ರಹಣೆ ಮಾಡಲಾಗುತ್ತಿದ್ದು, ಉದ್ದೇಶಿತ ಕಂಚಿನಡ್ಕ ಪ್ರದೇಶವು ಕೇವಲ 7.50 ಕಿ.ಮೀ. ದೂರದಲ್ಲಿರುವುದರಿಂದ, ಈ ಟೋಲ್ ಪ್ಲಾಜಾ ನಿರ್ಮಾಣ ಕಾರ್ಯವು ಆತುರದ ನಿರ್ಧಾರವಾಗಿರುವುದಲ್ಲದೇ ಪ್ರತಿನಿತ್ಯ ಈ ರಸ್ತೆಯನ್ನೇ ಅವಲಿಂಬಿಸಿರುವ, ಸದರಿ ರಸ್ತೆಯಲ್ಲಿ ಓಡಾಡುವಂತಹ ಸುತ್ತಮುತ್ತಲಿನ ಗ್ರಾಮಸ್ಥರು, ವಿದ್ಯಾರ್ಥಿಗಳು, ಸಣ್ಣ ವ್ಯಾಪಾರಸ್ಥರು, ಕಾರ್ಮಿಕರು, ಕ್ಯಾಬ್ ಮತ್ತು ಆಟೋ ಚಾಲಕರುಗಳು ಎರಡು ಬಾರಿ ಶುಲ್ಕವನ್ನು ಭರಿಸಬೇಕಾಗುತ್ತದೆ. ಇದರಿಂದ ಆರ್ಥಿಕವಾಗಿ ಸದರಿಯವರುಗಳು ತೊಂದರೆಗೊಳಗಾಗುತ್ತಾರೆಂದು ಸಭೆಯಲ್ಲಿದ್ದ ಪ್ರತಿನಿಧಿಗಳು ಕಳವಳ ವ್ಯಕ್ತಪಡಿಸಿ, ಸುಂಕ ವಸೂಲಾತಿ ಕೇಂದ್ರವನ್ನು ರದ್ದುಪಡಿಸುವಂತೆ ಜನಪ್ರತಿನಿಧಿಗಳು ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ.

ಈ ವಿಷಯವು ಸಾರ್ವಜನಿಕ ಹಿತದೃಷ್ಟಿಯಿಂದಾಗಿ ಸೂಕ್ಷ್ಮತೆಯಿಂದ ಕೂಡಿರುವುದರಿಂದ, ಮೇಲ್ಕಂಡಂತೆ ಕಂಚಿನಡ್ಕ ಪ್ರದೇಶದಲ್ಲಿ ಕಾರ್ಯಾರಂಭ ಮಾಡಲು ಉದ್ದೇಶಿಸಿರುವ ಸುಂಕ ವಸೂಲಾತಿ ಕೇಂದ್ರದ ಬಗ್ಗೆ ಮತ್ತೊಮ್ಮೆ ಕೂಲಂಕಷವಾಗಿ ಪರಿಶೀಲಿಸಿ, ಮತ್ತೊಮ್ಮೆ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುವವರೆವಿಗೆ ಸದರಿ ಸಂಸ್ಥೆಗೆ ನೀಡಲಾಗಿರುವ ಕಾರ್ಯಾದೇಶ ಆದೇಶವನ್ನು ತಾತ್ಕಾಲಿಕವಾಗಿ ತಡೆಹಿಡಿದು, ಕಂಚಿನಡ್ಕ ಪ್ರದೇಶದಲ್ಲಿ ಸಂಚಾರ ವ್ಯವಸ್ಥೆಯನ್ನು ಯಥಾಸ್ಥಿತಿಯಲ್ಲಿ ಮುಂದುವರೆಸುವ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸಚಿವರು ಸೂಚಿಸಿದ್ದಾರೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!