ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದುವೆಗೆ ಅತಿಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಕಾಲುವೆಗೆ ಉರುಳಿ 10 ಮಂದಿ ಸಾವನ್ನಪ್ಪಿರುವ ಭೀಕರ ಘಟನೆ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್‌ನಲ್ಲಿ ನಡೆದಿದೆ. ಇಲ್ಲಿನ ಹಂಟರ್ ವ್ಯಾಲಿ ಪ್ರದೇಶದಲ್ಲಿ ನಡೆದ ದುರ್ಘಟನೆಯಲ್ಲಿ 11 ಮಂದಿ ಗಾಯಗೊಂಡಿದ್ದು, ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರೇಟಾದಲ್ಲಿನ ಹಂಟರ್ ಎಕ್ಸ್‌ಪ್ರೆಸ್‌ವೇ ಆಫ್-ರಾಂಪ್ ಬಳಿ ವೈನ್ ಕಂಟ್ರಿ ಡ್ರೈವ್‌ನಲ್ಲಿ ಅಪಘಾತ ಸಂಭವಿಸಿದೆ ಎಂದು ಆಸ್ಟ್ರೇಲಿಯಾ ಪೊಲೀಸರು ತಿಳಿಸಿದ್ದಾರೆ. ಅಪಘಾತ ತಕ್ಷಣವೇ ತುರ್ತು ಸೇವೆಗಳನ್ನು ಒದಗಿಸಲಾಯಿತು. ಗಾಯಗೊಂಡ 11 ಜನರನ್ನು ಹೆಲಿಕಾಪ್ಟರ್ ಮತ್ತು ರಸ್ತೆ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಮಾರ್ನಿಂಗ್ ಹೆರಾಲ್ಡ್ ವರದಿ ಮಾಡಿದೆ. ಅಪಘಾತದಲ್ಲಿ 18 ಪ್ರಯಾಣಿಕರು ಪಾರಾಗಿದ್ದಾರೆ.
ಹಂಟ್ಲಿಯಲ್ಲಿ ನ್ಯೂ ಇಂಗ್ಲೆಂಡ್ ಹೆದ್ದಾರಿ ಮತ್ತು ಬ್ರಿಡ್ಜ್ ಸ್ಟ್ರೀಟ್ ವೃತ್ತದ ನಡುವೆ ಎರಡೂ ದಿಕ್ಕುಗಳಲ್ಲಿ ವೈನ್ ಕಂಟ್ರಿ ಡ್ರೈವ್ ಮುಚ್ಚಿರುವುದರಿಂದ ಪ್ರಮುಖ ತುರ್ತು ಕಾರ್ಯಾಚರಣೆ ನಡೆಯುತ್ತಿದೆ. ಗಾಯಗೊಂಡವರನ್ನು ರಸ್ತೆ ಮತ್ತು ವಿಮಾನದ ಮೂಲಕ ನ್ಯೂ ಲ್ಯಾಂಬ್ಟನ್ ಹೈಟ್ಸ್‌ನಲ್ಲಿರುವ ಜಾನ್ ಹಂಟರ್ ಆಸ್ಪತ್ರೆಗೆ ಮತ್ತು ವಾರತಾಹ್‌ನಲ್ಲಿರುವ ಮೇಟರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಸ್ಪೆಷಲಿಸ್ಟ್ ಫೋರೆನ್ಸಿಕ್ ಪೊಲೀಸರು ಮತ್ತು ಕ್ರ್ಯಾಶ್ ಇನ್ವೆಸ್ಟಿಗೇಶನ್ ಯುನಿಟ್ ಸೋಮವಾರ ಅಪಘಾತವನ್ನು ವಿಶ್ಲೇಷಿಸಲಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಸೆಸ್ನಾಕ್‌ನ ಮೇಯರ್, ಜೇ ಸುವಾಲ್, ಬಸ್ ಅಪಘಾತದ ಸುದ್ದಿಯನ್ನು ಅತ್ಯಂತ ಭಯಾನಕ ಎಂದು ಬಣ್ಣಿಸಿದ್ದಾರೆ. ನೈನ್ ಟುಡೇ ಕಾರ್ಯಕ್ರಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಜೈ ಸುವಾಲ್, ಅಪಘಾತಕ್ಕೀಡಾದವರಿಗೆ ನಾವು ಎಲ್ಲ ರೀತಿಯಿಂದಲೂ ಸಹಾಯ ಮಾಡುತ್ತೇವೆ ಎಂದರು.