ಕಾಶ್ಮೀರ ಪ್ರವಾಸದ ಅನುಭವದ ಜೊತೆ ಮೋದಿ ನೆನೆದ ತೆಂಡೂಲ್ಕರ್‌: ಇದು ವಿಕಸಿತ ಭಾರತ ಎಂದ ಪ್ರಧಾನಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕ್ರಿಕೆಟ್‌ ದೇವರು ಎಂದೇ ಖ್ಯಾತಿಯ ಸಚಿನ್‌ ತೆಂಡೂಲ್ಕರ್‌ (Sachin Tendulkar) ಅವರು ಇತ್ತೀಚೆಗೆ ಜಮ್ಮು-ಕಾಶ್ಮೀರ (Jammu Kashmir) ಪ್ರವಾಸ ಕೈಗೊಂಡಿದ್ದರು. ಈ ವೇಳೆ ಕಾಶ್ಮೀರದ ಗಲ್ಲಿಗಳಲ್ಲಿ ಕ್ರಿಕೆಟ್‌ ಆಡುವುದು, ಬ್ಯಾಟ್‌ ತಯಾರಿಕಾ ಘಟಕಕ್ಕೆ ಭೇಟಿ, ದಾಲ್‌ ಸರೋವರದಲ್ಲಿ ಬೋಟಿಂಗ್‌, ಉರಿ ಸೆಕ್ಟರ್‌ನಲ್ಲಿ ಪ್ರವಾಸ ಸೇರಿ ಹಲವು ಪ್ರದೇಶಗಳಿಗೆ ಭೇಟಿ ನೀಡಿದ್ದು, ಸಾಲು ಸಾಲು ಫೋಟೊಗಳು, ವಿಡಿಯೊಗಳನ್ನು ಪೋಸ್ಟ್‌ ಮಾಡುವ ಮೂಲಕ ಕಾಶ್ಮೀರ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದ್ದಾರೆ.

ಇದೀಗ ಪ್ರವಾಸದ ಬಲಿಯಾಕ್ ಸಚಿನ್‌ ತೆಂಡೂಲ್ಕರ್‌ ಅವರು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ನೆನೆದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಮೋದಿ, “ಇದು ವಿಕಸಿತ ಭಾರತದ ದ್ಯೋತಕ” ಎಂದಿದ್ದಾರೆ.

ಕಾಶ್ಮೀರ ಪ್ರವಾಸದ ಝಲಕ್‌ಗಳಿರುವ ವಿಡಿಯೊವನ್ನು ಸಚಿನ್‌ ತೆಂಡೂಲ್ಕರ್‌ ಅವರು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. “ಜಮ್ಮು-ಕಾಶ್ಮೀರ ಪ್ರವಾಸದ ಅದ್ಭುತ ಅನುಭವವು ನನ್ನ ಸ್ಮೃತಿಪಟಲದಲ್ಲಿ ಎಂದಿಗೂ ಇರುತ್ತದೆ. ಹಿಮತ ಚಳಿಯ ಮಧ್ಯೆ ಕಾಶ್ಮೀರ ಜನರ ಅದ್ಭುತ ಆತಿಥ್ಯವು ನನ್ನ ಮನಸ್ಸನ್ನು ಬೆಚ್ಚಗಾಗಿಸಿದೆ. ದೇಶದಲ್ಲಿ ನೋಡಬೇಕಾಗಿರುವುದು ತುಂಬ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದರು. ಈ ಟ್ರಿಪ್‌ ನಂತರ ಅವರ ಮಾತನ್ನು ಒಪ್ಪದೇ ಇರಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

ಸಚಿನ್‌ ತೆಂಡೂಲ್ಕರ್‌ ಪೋಸ್ಟ್‌ಗೆ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ. “ಇದು ಅದ್ಭುತ ಸಂಗತಿ. ಜಮ್ಮು-ಕಾಶ್ಮೀರಕ್ಕೆ ಸಚಿನ್‌ ತೆಂಡೂಲ್ಕರ್‌ ಕೈಗೊಂಡ ಮನಮೋಹಕ ಪ್ರವಾಸದ ಬಳಿಕ ಯುವಕರು ಕೂಡ ಇಲ್ಲಿಗೆ ಬರಲು ಎರಡು ಕಾರಣಗಳಿವೆ. ಅದ್ಭುತ ತಾಣಗಳನ್ನು ನೀವು ಕಣ್ತುಂಬಿಕೊಳ್ಳುವುದು ಒಂದು ಕಾರಣವಾದರೆ, ಮೇಕ್‌ ಇನ್‌ ಇಂಡಿಯಾವನ್ನು ತಿಳಿದುಕೊಳ್ಳಲು ಮತ್ತೊಂದು ಕಾರಣವಾಗಿದೆ. ಎಲ್ಲರೂ ಒಗ್ಗೂಡಿ ವಿಕಸಿತ ಹಾಗೂ ಆತ್ಮನಿರ್ಭರ ಭಾರತವನ್ನು ನಿರ್ಮಿಸೋಣ” ಎಂದು ಪ್ರಧಾನಿ ಹೇಳಿದ್ದಾರೆ.

ಈ ವೇಳೆ ಮೇಕ್‌ ಇನ್‌ ಇಂಡಿಯಾ ಕುರಿತು ಕೂಡ ಸಚಿನ್‌ ತೆಂಡೂಲ್ಕರ್‌ ಪ್ರಸ್ತಾಪಿಸಿ,. “ಕಾಶ್ಮೀರದ ವಿಲ್ಲೋ ಬ್ಯಾಟ್‌ಗಳ ತಯಾರಿಕೆಯು ಮೇಕ್‌ ಇನ್‌ ಇಂಡಿಯಾ, ಮೇಕ್‌ ಫಾರ್‌ ದಿ ವರ್ಲ್ಡ್‌ ಅಭಿಯಾನದ ಅತ್ಯುತ್ತಮ ಉದಾಹರಣೆಯಾಗಿವೆ. ಕಾಶ್ಮೀರ್‌ ವಿಲ್ಲೋ ಬ್ಯಾಟ್‌ಗಳು ಈಗ ಜಗತ್ತಿನಾದ್ಯಂತ ಪಸರಿಸಿವೆ. ಜಗತ್ತಿನ ಹಾಗೂ ಭಾರತದ ಎಲ್ಲರಿಗೂ ನನ್ನದೊಂದು ಭಿನ್ನಹವಿದೆ. ಎಲ್ಲರೂ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿ, ಅದ್ಭುತ ಅನುಭವವನ್ನು ಜೋಳಿಗೆಯಲ್ಲಿ ತುಂಬಿಕೊಂಡು ಹೋಗಿ” ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!