ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಲಿವುಡ್‌ನ ತೆರೆಯ ಮೇಲಿನ ಸೂಪರ್ ಹಿಟ್ ಜೋಡಿ ಎನಿಸಿಕೊಂಡಿರುವ ದಳಪತಿ ವಿಜಯ್ ಮತ್ತು ತ್ರಿಷಾ ಕೃಷ್ಣನ್ ಅವರ ಸ್ನೇಹಕ್ಕೆ ಎರಡು ದಶಕಗಳ ಇತಿಹಾಸವಿದೆ. ಸದ್ಯ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ 108 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ಐತಿಹಾಸಿಕ ಗೆಲುವಿನ ಬೆನ್ನಲ್ಲೇ, ವಿಜಯ್ ಅವರ ವ್ಯಕ್ತಿತ್ವದ ಬಗ್ಗೆ ನಟಿ ತ್ರಿಷಾ ಈ ಹಿಂದೆ ಆಡಿದ್ದ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿವೆ.
ವಿಜಯ್ ಮತ್ತು ತ್ರಿಷಾ ‘ಗಿಲ್ಲಿ’, ‘ಕುರುವಿ’, ‘ಲಿಯೋ’ ಸೇರಿದಂತೆ ಹಲವು ಬ್ಲಾಕ್‌ಬಸ್ಟರ್ ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ. ಹಲವು ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ತ್ರಿಷಾ, ವಿಜಯ್ ಅವರ ವಿಚಿತ್ರ ಎನಿಸುವ ಒಂದು ಅಭ್ಯಾಸದ ಬಗ್ಗೆ ಮೌನ ಮುರಿದಿದ್ದರು.
“ಶೂಟಿಂಗ್ ಸೆಟ್‌ನಲ್ಲಿ ವಿಜಯ್ ಸದಾ ಮೌನವಾಗಿರುತ್ತಾರೆ. ವಿರಾಮದ ಸಮಯದಲ್ಲಿ ಎಲ್ಲರೂ ಹರಟೆ ಹೊಡೆಯುತ್ತಿದ್ದರೆ, ಅವರು ಮಾತ್ರ ಯಾವುದೋ ಮೂಲೆಯಲ್ಲಿ ಗೋಡೆ ಮುಖ ಮಾಡಿ ಗಂಟೆಗಟ್ಟಲೆ ಕುಳಿತಿರುತ್ತಾರೆ. ಆರಂಭದಲ್ಲಿ ಅವರ ಈ ನಡವಳಿಕೆ ನನಗೆ ಅಸಹನೀಯ ಎನಿಸಿತ್ತು. ಅವರು ಅಹಂಕಾರಿ ಇರಬಹುದು ಎಂಬ ತಪ್ಪು ಕಲ್ಪನೆ ನನಗಿತ್ತು” ಎಂದು ತ್ರಿಷಾ ಹೇಳಿಕೊಂಡಿದ್ದರು.
ಅಷ್ಟೇ ಅಲ್ಲದೆ, ವಿಜಯ್ ಅವರನ್ನು ‘ಸೈಲೆಂಟ್ ಕಿಲ್ಲರ್’ ಎಂದು ಬಣ್ಣಿಸಿದ್ದ ತ್ರಿಷಾ, ಅವರು ಏನನ್ನೂ ಮಾತನಾಡದೆಯೇ ತಮ್ಮ ನಿಗೂಢ ಆಕರ್ಷಣೆಯಿಂದ ಜನರನ್ನು ಸೆಳೆಯಬಲ್ಲರು ಎಂದು ಹೇಳಿದ್ದರು. ಅಂದು ಸಿನಿಮಾದ ಬಗ್ಗೆ ತ್ರಿಷಾ ಹೇಳಿದ್ದ ಈ ಮಾತುಗಳು, ಇಂದು ರಾಜಕೀಯವಾಗಿ ಅಕ್ಷರಶಃ ನಿಜವಾಗಿವೆ ಎನ್ನುತ್ತಿದ್ದಾರೆ ಅಭಿಮಾನಿಗಳು.
ತಮಿಳುನಾಡಿನ 234 ಸದಸ್ಯರ ವಿಧಾನಸಭೆಯಲ್ಲಿ ವಿಜಯ್ 108 ಸ್ಥಾನಗಳನ್ನು ಗೆದ್ದು ಮ್ಯಾಜಿಕ್ ಮಾಡಿದ್ದಾರೆ. ಆದರೆ, ಸರ್ಕಾರ ರಚನೆಗೆ ಅಗತ್ಯವಿರುವ 118ರ ಮ್ಯಾಜಿಕ್ ನಂಬರ್‌ಗೆ 10 ಸ್ಥಾನಗಳ ಕೊರತೆ ಇರುವುದರಿಂದ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರು ಪ್ರಮಾಣವಚನಕ್ಕೆ ತಡೆ ಒಡ್ಡಿದ್ದಾರೆ.
ರಾಜ್ಯದಲ್ಲಿ ಸದ್ಯ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಕಾಂಗ್ರೆಸ್‌ನ 5 ಸದಸ್ಯರ ಬೆಂಬಲವಿದ್ದರೂ ಬಹುಮತಕ್ಕೆ ಇನ್ನೂ ಹರಸಾಹಸ ಪಡಬೇಕಿದೆ. ಈ ಬಿಕ್ಕಟ್ಟಿನ ನಡುವೆಯೂ ವಿಜಯ್ ಎಂದಿನಂತೆ ಸೈಲೆಂಟ್ ಆಗಿಯೇ ತಮ್ಮ ಮುಂದಿನ ‘ಮಾಸ್ಟರ್ ಪ್ಲ್ಯಾನ್’ ರೂಪಿಸುತ್ತಿದ್ದಾರಾ? ಎಂಬ ಕುತೂಹಲ ಇಡೀ ದೇಶದಾದ್ಯಂತ ಮನೆಮಾಡಿದೆ.



