ಹೊಸದಿಗಂತ ಡಿಜಿಟಲ್ ಡೆಸ್ಕ್:
ಓಮಿನಿ ಕಾರು ಹಾಗೂ ಲಾರಿ ಮಧ್ಯೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದು, ಇನ್ನೂ ಮೂವರು ಗಂಭೀರ ಗಾಯಗೊಂಡಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಕಿರೆಸೂರು ಬಳಿ ನಡೆದಿದೆ.
ಶುಕ್ರವಾರ ರಾತ್ರಿ 10 ಗಂಟೆಯ ಸುಮಾರಿಗೆ ಘಟನೆ ನಡೆದಿದೆ. ಜಾಫರ್‌ಸಾಬ್ ಮಂಗಳೂರು (60), ಮಹ್ಮದ್ ಮುಸ್ತಫಾ ಮಂಗಳೂರು (36), ಶೋಹೆಬ್ ಮಂಗಳೂರು (6) ಮೃತ ದುರ್ದೈವಿಗಳು. ಮೃತರು ಕೊಪ್ಪಳ ತಾಲೂಕಿನ ಮಂಗಳಾಪುರ ಗ್ರಾಮದ ನಿವಾಸಿಗಳು. ಮೃತ ಜಾಫರ್‌ಸಾಬ್ ಕುಟುಂಬದವರ ಜೊತೆ ಪಾರ್ಶ್ವವಾಯು ಔಷಧಿ ತರಲು ಕಾರವಾರ ಜಿಲ್ಲೆಯ ಹಲಗಾ ಗ್ರಾಮಕ್ಕೆ ಹೋಗಿದ್ದರು. ಔಷಧಿ ಪಡೆದು ಮರಳಿ ಊರಿಗೆ ಬರುವ ಸಂದರ್ಭ ಘಟನೆ ಸಂಭವಿಸಿದೆ.
ಇನ್ನೂ ಘಟನೆಯಲ್ಲಿ ಮೂವರು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಧಾರವಾಡ ಎಸ್‌ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.