ಹೊಸದಿಗಂತ ವರದಿ ಹುಬ್ಬಳ್ಳಿ:
ನಸುಕಿನ ಜಾವ ಉತ್ತರ ಕನ್ನಡ ಜಿಲ್ಲೆಯ ಅರಬೈಲ್ ಘಟ್ಟದಲ್ಲಿ ನಡೆದ ಲಾರಿ ಉರುಳಿ ಭೀಕರ ಅಪಘಾತದಲ್ಲಿ ಗಾಯಗೊಂಡ 10 ಜನರಿಗೆ ನಗರದ ಕೆಎಂಸಿಆರ್ ಐ ನಲ್ಲಿ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಬೆಳಿಗ್ಗೆ 6:30 ಕ್ಕೆ ಆ್ಯಂಬ್ಯುಲೆನ್ಸ್ ಮೂಲಕ ಇಲ್ಲಿಗೆ ಕರೆತರಲಾಗಿದೆ.
ಗಾಯಗೊಂಡ 11 ಜನರಲ್ಲಿ ಹುಬ್ಬಳ್ಳಿ ಮಿಲತ್ ನಗರದ ನಿವಾಸಿ ಜಲಾಲ್ ಬಾಷಾ(27) ಆಸ್ಪತ್ರೆಗೆ ದಾಖಲಾಗುವ ಪೂರ್ವವೇ ಮೃತಪಟ್ಟಿದ್ದಾರೆ. ಮಲ್ಲಿಕ್ ರಿಹಾನ್(22), ಅಪ್ಸರ್‌ಖಾನ್(20), ಅಶ್ರಫ್ ಎಲ್(20), ನಿಜಾಮುದ್ದೀನ್ ಸುಧಾಗರ್(28) ಖಾಜಾ ಹುಸೇನ್(30), ಖಾಜಾ ಮೈನ್(21), ಮಹ್ಮದ್ ಸಾದಿಕ್(21) ಮರ್ದಾನ್ ಸಾಬ್(21), ಇರ್ಫಾನ್ ಗುಡಿಗೇರಿ(18), ಜಾಫರ್ ಸವಣೂರು(28) ಗಾಯಗೊಂಡವರು.
ಅಪಘಾತದಲ್ಲಿ ಗಾಯಗೊಂಡ ನಗರದ ಕೆಎಂಸಿಆರ್ ಐ ನ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆ ನಿರ್ದೇಶಕ ಎಸ್. ಎಫ್. ಕಮ್ಮಾರ ಅವರು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಆಸ್ಪತ್ರೆಗೆ ದಾಖಲಾಗುವ ಮೊದಲೇ ಒಬ್ಬರು ಮೃತಪಟ್ಟಿದ್ದಾರೆ. ಉಳಿದ ಗಾಯಾಳುಗಳ ಚಿಕಿತ್ಸೆಗೆ ವೈದ್ಯರ ವಿಶೇಷ ತಂಡ ರಚಿಸಲಾಗಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗೆ ವಿವಿಧ ಪರೀಕ್ಷೆಗಳು ನಡೆಯುತ್ತಿವೆ. ಸದ್ಯ ಎಲ್ಲರೂ ಆರೋಗ್ಯವಾಗಿದ್ದಾರೆ’ ಎಂದು ಕೆಎಂಸಿ-ಆರ್‌ಐ ನಿರ್ದೇಶಕ ಎಸ್.ಎಫ್. ಕಮ್ಮಾರ್ ತಿಳಿಸಿದ್ದಾರೆ.