ವೆರ್ಣಾ ಕೈಗಾರಿಕಾ ಪ್ರದೇಶದಲ್ಲಿ ಭೀಕರ ಅಗ್ನಿ ದುರಂತ: 30ಕ್ಕೂ ಹೆಚ್ಚು ಕಾರುಗಳು ಭಸ್ಮ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗೋವಾದ ಪಣಜಿ ವೆರ್ಣಾ ಕೈಗಾರಿಕಾ ಪ್ರದೇಶದಲ್ಲಿ ಮಂಗಳವಾರ ಮಧ್ಯಾಹ್ನ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ರೆನಾಲ್ಟ್‌ ಕಂಪೆನಿಯ ೩೦ಕ್ಕೂ ಹೆಚ್ಚು ಕಾರುಗಳು ಬೆಂಕಿಗೆ ಆಹುತಿಯಾಗಿವೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ೨ ಗಂಟೆಗಳ ಕಾಲ ಹೋರಾಟ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದು, ದೊಡ್ಡ ಅನಾಹುತವೊಂದನ್ನು ತಪ್ಪಿಸಿದಂತಾಗಿದೆ.

ಮಡಗಾಂ-ಪಣಜಿ ಹೆದ್ದಾರಿಯ ಪಕ್ಕದಲ್ಲಿಯೇ ರೆನಾಲ್ಟ್‌ ಕಂಪೆನಿಯ ಶೋರೂಮ್‌ ಇದ್ದು, ಅಲ್ಲಿ ಕಾರು ಮಾರಾಟ ಮತ್ತು ಸರ್ವಿಸ್‌ ಮಾಡಲಾಗುತ್ತದೆ. ಕಂಪೆನಿಯ ಮುಂಭಾಗದಲ್ಲಿ ಇರುವ ಬಯಲಿನಲ್ಲಿ ಮಾರಾಟಕ್ಕೆ ತರಲಾದ ಕಾರುಗಳನ್ನು ನಿಲ್ಲಿಸಲಾಗುತ್ತದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಮಂಗಳವಾರ ಮಧ್ಯಾಹ್ನ ೩ ಗಂಟೆಯ ಸುಮಾರಿಗೆ ಅಲ್ಲಿನ ಒಣ ಹುಲ್ಲಿಗೆ ಬೆಂಕಿ ಹೊತ್ತಿಕೊಂಡಿದೆ. ನೋಡು ನೋಡುತ್ತಿರುವಂತೆಯೇ, ಬೆಂಕಿಯು ಕಾರುಗಳನ್ನು ನಿಲ್ಲಿಸಲಾದ ಜಾಗೆಯನ್ನು ತಲುಪಿದೆ.

ಕಂಪೆನಿಯ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಲು ನಡೆಸಿದ ಪ್ರಯತ್ನ ವಿಫಲವಾಗಿದ್ದು, ಕೆಲವೇ ಕ್ಷಣಗಳಲ್ಲಿಯೇ ಬೆಂಕಿಯ ಜ್ವಾಲೆಗಳು ೩೦ಕ್ಕೂ ಹೆಚ್ಚು ಕಾರುಗಳನ್ನು ಆಪೋಶನಕ್ಕೆ ತೆಗೆದುಕೊಂಡಿದೆ. ಅಷ್ಟರಲ್ಲಿ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ೨ ಗಂಟೆಗಳ ಕಾಲ ಹೋರಾಟ ನಡೆಸಿ ಬೆಂಕಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

ವೆರ್ಣಾ ಕೈಗಾರಿಕಾ ಪ್ರದೇಶವು ಗೋವೆಯ ಅತಿ ದೊಡ್ಡ ಕೈಗಾರಿಕಾ ಪ್ರದೇಶವಾಗಿದ್ದು ಸಿಪ್ಲಾ, ಫಿನೊಲೆಕ್ಸ್‌, ಡಿ-ಲಿಂಕ್‌ನಂತಹ ನೂರಾರು ಕಂಪೆನಿಗಳು ಕಾರ್ಯಾಚರಿಸುತ್ತಿವೆ. ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ಹತೋಟಿಗೆ ತರುವ ಮೂಲಕ ದೊಡ್ಡ ಅನಾಹುತವನ್ನು ತಪ್ಪಿಸಿದಂತಾಗಿದೆ.

- Advertisement - Ply

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!