ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಗಾಲ್ಯಾಂಡ್ ನಲ್ಲಿ ಭೀಕರ ಭೂಕುಸಿತ ಸಂಭವಿಸಿದ್ದು, ರಾಷ್ಟ್ರೀಯ ಹೆದ್ದಾರಿ 29ರಲ್ಲಿ ಸಂಭವಿಸಿದ ದುರಂತದಲ್ಲಿ ಕನಿಷ್ಠ 6 ಮಂದಿ ಸಾವಿಗೀಡಾಗಿದ್ದಾರೆ.
ನಾಗಾಲ್ಯಾಂಡ್‌ನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ 29 ರಲ್ಲಿ ಭೂಕುಸಿತ ಉಂಟಾಗಿದ್ದು, ಈ ಭೀಕರ ಘಟನೆಯಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ.
ಹೆದ್ದಾರಿಯ ಹಲವು ಕಡೆ ಭೂಕುಸಿತ ಸಂಭವಿಸಿದ್ದು, ಇಡೀ ರಸ್ತೆಯೇ ಕೊಚ್ಚಿಕೊಂಡು ಹೋಗಿದೆ.
ಪರಿಣಾಮ ವಾಣಿಜ್ಯ ಕೇಂದ್ರಗಳಾದ ದಿಮಾಪುರ್ ಮತ್ತು ರಾಜ್ಯ ರಾಜಧಾನಿ ಕೊಹಿಮಾ ನಡುವಿನ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ. ಅಲ್ಲದೆ ಹೆದ್ದಾರಿ ರಸ್ತೆ ಬದಿಯಲ್ಲಿದ್ದ ಹಲವಾರು ಮನೆಗಳು ಮತ್ತು ರಸ್ತೆ ಬದಿಯ ಹೊಟೆಲ್ ಗಳು ಮತ್ತು ಇತರೆ ಕಟ್ಟಡಗಳಿಗೂ ಭೂ ಕುಸಿತದಿಂದಾಗಿ ಹಾನಿಯಾಗಿದೆ.
ಘಟನೆಯಿಂದ ನೂರಾರು ವಾಹನಗಳು ಜಖಂಗೊಂಡಿದ್ದು, ಅನಾಹುತದ ತೀವ್ರತೆಯನ್ನು ಗಮನಿಸಿದರೆ ರಸ್ತೆಯನ್ನು ತೆರವುಗೊಳಿಸಲು ತುಂಬಾ ಸಮಯ ಹಿಡಿಯಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ನಾಗಾಲ್ಯಾಂಡ್ ಮುಖ್ಯಮಂತ್ರಿ ನೆಫಿಯು ರಿಯೊ, ‘ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.