April 18, 2026
Saturday, April 18, 2026
spot_img

ಉಳ್ಳಾಲದಲ್ಲಿ ಭೀಕರ ದುರಂತ: ಏಕಾಏಕಿ ಕುಸಿದು ಬಿದ್ದ ಆವರಣ ಗೋಡೆ, ಉರುಳಿ ಬಿದ್ದ ಜೆಸಿಬಿ

ಹೊಸ ದಿಗಂತ ವರದಿ, ಉಳ್ಳಾಲ:

ನಿರ್ಮಾಣ ಹಂತದ ಲೇ ಔಟ್ ಒಂದರ ಎತ್ತರದ ಆವರಣ ಗೋಡೆಯು ದಿಢೀರನೆ ಕುಸಿದು ಬಿದ್ದ ಪರಿಣಾಮ ಲೇಔಟ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಜೆಸಿಬಿ ಯಂತ್ರವು ಪಕ್ಕದ ರಸ್ತೆಗೆ ಉರುಳಿ ಬಿದ್ದಿದ್ದು, ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ಕಾರು, ಆಟೋ ರಿಕ್ಷಾ, ಬೈಕ್ ಮತ್ತು ಪಕ್ಕದ ಮನೆಗಳ ಆವರಣ ಗೋಡೆ ಮತ್ತು ಗೇಟ್ ಗಳು ಜಖಂಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ಸೋಮೇಶ್ವರ ಪುರಸಭೆ ವ್ಯಾಪ್ತಿಯ ಕುಂಪಲ ಗುರುನಗರ ಎಂಬಲ್ಲಿ ಶನಿವಾರ ಸಂಜೆ ನಡೆದಿದೆ.

ಕುಂಪಲ ನಿವಾಸಿ ದೇವೇಶ ಸರಳಾಯ ಎಂಬವರು ಕುಂಪಲ ಗುರುನಗರದ ಶ್ರೀ ಕೃಷ್ಣ ಮುಖ್ಯಪ್ರಾಣ ದೇವಸ್ಥಾನದ ಬಳಿ ನಿರ್ಮಿಸುತ್ತಿರುವ ವಸತಿ ಬಡಾವಣೆಯ ಬೃಹತ್ ಆವರಣ ಗೋಡೆಯು ಶನಿವಾರ ಸಂಜೆ ಏಕಾಏಕಿ ಕುಸಿದು ಪಕ್ಕದ ಬಡಾವಣೆಯ ರಸ್ತೆಗೆ ಬಿದ್ದಿದೆ. ಲೇ ಔಟ್ ಆವರಣದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಜೆಸಿಬಿ ಯಂತ್ರವು ಆವರಣ ಗೋಡೆಯ ಜತೆಯಲ್ಲೇ ಪಕ್ಕದ ರಸ್ತೆಗೆ ಉರುಳಿ ಬಿದ್ದಿದ್ದು, ಚಾಲಕನು ಜೆಸಿಬಿ ಯಂತ್ರದಿಂದ ಹೊರ ಜಿಗಿದು ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕುಸಿದು ಬಿದ್ದ ಆವರಣ ಗೋಡೆಯ ಪಕ್ಕದ ರಸ್ತೆಯಲ್ಲಿ ದಿನ ನಿತ್ಯವೂ ಸಂಜೆ ಸ್ಥಳೀಯ ಮಕ್ಕಳು ಆಟವಾಡುತ್ತಿದ್ದು ಘಟನೆಯು ಸಂಜೆ ನಾಲ್ಕು ಗಂಟೆಗೆ ಘಟಿಸಿದ್ದರಿಂದ ಆ ವೇಳೆ ರಸ್ತೆಯಲ್ಲಿ ಬಿಸಿಲು ಇದ್ದ ಕಾರಣ ಮಕ್ಕಳು ಆಟವಾಡಲು ಮನೆಗಳಿಂದ ಹೊರಬಂದಿರಲಿಲ್ಲ. ಮಕ್ಕಳು ಆಟವಾಡುತ್ತಿದ್ದ ವೇಳೆ ಘಟನೆ ನಡೆಯುತ್ತಿದ್ದರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಳೆಗಾಲದಲ್ಲಿ ನೀರಿನ ಹರಿವು ಮತ್ತು ಮಣ್ಣು ಒದ್ದೆಯಾದ ಸಂದರ್ಭದಲ್ಲಿ ಈ ಘಟನೆಯು ಸಂಭವಿಸಿರುತ್ತಿದ್ದರೆ ಘನ ಘೋರ ಅನಾಹುತವೇ ಸಂಭವಿಸುತ್ತಿತ್ತು. ಕಳಪೆ ಕಾಮಗಾರಿ ನಡೆಸಿ ನಿರ್ಲಕ್ಷ್ಯ ವಹಿಸಿ ಘಟನೆಗೆ ಕಾರಣರಾದವರ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಸ್ಥಳೀಯ ಬಡಾವಣೆ ನಿವಾಸಿ ಸುಶಿತ್ ರಾವ್ ಅವರ ಕಾರು ಮತ್ತು ಆಟೋ ರಿಕ್ಷಾ, ರಕ್ಷಿತ್ ಎಂಬವರ ಮೋಟಾರ್ ಬೈಕ್ ಜಖಂ ಗೊಂಡಿದೆ. ಆವರಣ ಗೋಡೆ ಕುಸಿದ ರಭಸಕ್ಕೆ ಪಕ್ಕದ ಬಡಾವಣೆಯ ಮನೆಗಳ ಆವರಣ ಗೋಡೆಗಳು ಮತ್ತು ಗೇಟ್ ಗಳು ಜಖಂಗೊಂಡಿವೆ.

ಕಳಪೆ ಕಾಮಗಾರಿಯಿಂದಲೇ ಎತ್ತರದ ಆವರಣಗೋಡೆಯು ಕುಸಿದು ಬಿದ್ದಿದೆಯೆಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಸೋಮೇಶ್ವರ ಪುರಸಭೆಯ ಉಪಾಧ್ಯಕ್ಷರಾದ ರವಿಶಂಕರ ಸೋಮೇಶ್ವರ, ಸದಸ್ಯರಾದ ಮನೋಜ್ ಕಟ್ಟೆಮನೆ,ಮೋಹನ್ ಶೆಟ್ಟಿ ಕುಂಪಲ,ಜಯ ಪೂಜಾರಿ,ಪುರಸಭಾ ಅಧಿಕಾರಿಗಳು ಮತ್ತು ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !