ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಬ್ಬ ಸಾಮಾನ್ಯ ಬಸ್ ಕಂಡಕ್ಟರ್ ಆಗಿ ವೃತ್ತಿಜೀವನ ಆರಂಭಿಸಿ, ಇಂದು ಭಾರತೀಯ ಚಿತ್ರರಂಗದ ಅಪ್ರತಿಮ ಸೂಪರ್‌ಸ್ಟಾರ್ ಆಗಿ ಬೆಳೆದಿರುವ ನಟ ರಜನಿಕಾಂತ್ ಜೀವನ ಪ್ರಯಾಣ ಕೋಟ್ಯಂತರ ಜನರಿಗೆ ಪ್ರೇರಣೆಯಾಗಿದೆ. ಸದ್ಯ ‘ತಲೈವಾ’ ಕಳೆದ ಕೆಲವು ಸಮಯದಿಂದ ತಮ್ಮ ಆತ್ಮಕಥೆಯನ್ನು ಬರೆಯುತ್ತಿದ್ದು, ಈಗ ಈ ಪುಸ್ತಕವನ್ನು ಆಧರಿಸಿ ದೊಡ್ಡ ಮಟ್ಟದ ಚಲನಚಿತ್ರವೊಂದನ್ನು ನಿರ್ಮಿಸಲು ಸಿದ್ಧತೆಗಳು ನಡೆಯುತ್ತಿವೆ ಎಂದು ತಿಳಿದು ಬಂದಿದೆ.
ಚಿತ್ರದ ಕುರಿತು ಇನ್ನೂ ಅಧಿಕೃತ ಪ್ರಕಟಣೆ ಹೊರಬೀಳಬೇಕಾಗಿದ್ದರೂ, ಈ ಬಹುನಿರೀಕ್ಷಿತ ಪ್ರಾಜೆಕ್ಟ್ ಬಗ್ಗೆ ಸಿನಿವಲಯದಲ್ಲಿ ಭಾರಿ ಚರ್ಚೆ ಆರಂಭವಾಗಿದೆ.
ಪುಸ್ತಕದಲ್ಲಿರಲಿದೆ ರೋಚಕ ಇತಿಹಾಸ
‘ಮೂವೀಸ್ ಸಿಂಗಾಪುರ್’ ವರದಿಯ ಪ್ರಕಾರ, ರಜನಿಕಾಂತ್ ಮುಂಬರುವ ಆತ್ಮಕಥೆಯು ಅವರ ಜೀವನದ ಪ್ರಮುಖ ಘಟ್ಟಗಳನ್ನು ಅನಾವರಣಗೊಳಿಸಲಿದೆ. ಅವರ ವೈಯಕ್ತಿಕ ಜೀವನ, ವೃತ್ತಿಜೀವನದ ಮೈಲಿಗಲ್ಲುಗಳು, ಸುವರ್ಣ ಕ್ಷಣಗಳು ಹಾಗೂ ಅವರು ಎದುರಿಸಿದ ಅಡೆತಡೆಗಳು ಮತ್ತು ಸವಾಲುಗಳ ಸಂಪೂರ್ಣ ವಿವರ ಈ ಪುಸ್ತಕದಲ್ಲಿರಲಿದೆ. ಇದೇ ಕಥೆಯನ್ನು ಚಲನಚಿತ್ರವಾಗಿಸುವ ಕುರಿತು ರಜನಿಕಾಂತ್ ಈಗಾಗಲೇ ತಮ್ಮ ಆಪ್ತರೊಂದಿಗೆ ಚರ್ಚಿಸಿದ್ದಾರೆ ಎಂದು ಹೇಳಲಾಗಿದೆ.
ಆತ್ಮಕಥೆ ಬರೆಯುತ್ತಿರುವುದನ್ನು ದೃಢಪಡಿಸಿದ ಮಗಳು ಸೌಂದರ್ಯಾ
ರಜನಿಕಾಂತ್ ಮಗಳು ಸೌಂದರ್ಯಾ ಈ ಹಿಂದೆಯೇ ತಂದೆಯ ಆತ್ಮಕಥೆ ಸಿದ್ಧವಾಗುತ್ತಿರುವ ಕುರಿತು ಸುಳಿವು ನೀಡಿದ್ದರು. “ನಮ್ಮ ಪ್ರೀತಿಯ ತಲೈವಾ, ಕಠಿಣ ಪರಿಶ್ರಮದ ಮೂಲಕ ತಮ್ಮದೇ ಆದ ಹಾದಿ ನಿರ್ಮಿಸಿಕೊಂಡವರು. ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿ ಪಟ್ಟ ಕಷ್ಟದಿಂದ ಹಿಡಿದು, ಕಾಲಿವುಡ್‌ನ ಸೂಪರ್‌ಸ್ಟಾರ್ ಆಗುವವರೆಗಿನ ತಮ್ಮ ಜೀವನದ ಇತಿಹಾಸವನ್ನು ರಜಿನಿ ಸರ್ ಈಗಾಗಲೇ ಬರೆಯಲು ಪ್ರಾರಂಭಿಸಿದ್ದಾರೆ. ಈ ಆತ್ಮಕಥೆಯು ಅವರ ಪ್ರತಿಯೊಂದು ಪಾತ್ರದ ಹಿಂದಿನ ಶ್ರಮ ಮತ್ತು ಜೀವನದ ಪಯಣವನ್ನು ಜಗತ್ತಿಗೆ ಪರಿಚಯಿಸಲಿದ್ದು, ಇದೊಂದು ಜಾಗತಿಕ ಸಂವೇದನೆಯಾಗಲಿದೆ” ಎಂದು ಅವರು ಸಂದರ್ಶನವೊಂದರಲ್ಲಿ ತಿಳಿಸಿದ್ದರು.
ಐದು ದಶಕಗಳ ಅದ್ಭುತ ಪಯಣ
ಸುಮಾರು ಐದು ದಶಕಗಳ ಹಿಂದೆ ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿದ್ದ ಶಿವಾಜಿ ರಾವ್ ಗಾಯಕ್ವಾಡ್, ಇಂದು ಜಾಗತಿಕ ಮಟ್ಟದಲ್ಲಿ ಅಭಿಮಾನಿಗಳನ್ನು ಹೊಂದಿರುವ ಭಾರತದ ಹೆಮ್ಮೆಯ ನಟ ರಜನಿಕಾಂತ್ ಆಗಿ ಬೆಳೆದಿದ್ದಾರೆ. ತಮಿಳು, ತೆಲುಗು, ಹಿಂದಿ ಮತ್ತು ಕನ್ನಡ ಚಿತ್ರರಂಗದಲ್ಲಿ ನಟಿಸಿರುವ ಇವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮಭೂಷಣ, ಪದ್ಮವಿಭೂಷಣ ಹಾಗೂ ಚಿತ್ರರಂಗದ ಪರಮೋಚ್ಛ ಗೌರವವಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಇದನ್ನೂ ಓದಿ:
ಮುಂದಿನ ಸಿನಿಮಾಗಳು
ರಜನಿಕಾಂತ್ ಈ ಬಯೋಪಿಕ್ ಸುದ್ದಿಯ ನಡುವೆಯೇ, ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಅವರ ಬಹುನಿರೀಕ್ಷಿತ ಚಿತ್ರ ‘ಜೈಲರ್ 2’ ಅಕ್ಟೋಬರ್ 15 ರಂದು ವಿಶ್ವಾದ್ಯಂತ ಬಿಡುಗಡೆಯಾಗಲು ಸಜ್ಜಾಗಿದೆ. ಇದರೊಂದಿಗೆ ಅಶ್ವತ್ ಮರಿಮುತ್ತು ನಿರ್ದೇಶನದ ‘ಧರ್ಮನ್’ ಚಿತ್ರದಲ್ಲೂ ರಜನಿಕಾಂತ್ ನಟಿಸುತ್ತಿದ್ದಾರೆ.



