ಹೊಸದಿಗಂತ ಹಾಸನ :
ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆ ಉಪಟಳ ಮುಂದುವರಿದಿದ್ದು, ಗಜಪಡೆ ಹಿಂಡು ಹಿಂಡಾಗಿ ಗ್ರಾಮದೊಳಗೆ ಎಂಟ್ರಿಕೊಟ್ಟಿರುವ ಘಟನೆ ಬೇಲೂರು ತಾಲ್ಲೂಕಿನ, ಕೆಳಬಿಕ್ಕೋಡು ಗ್ರಾಮದಲ್ಲಿ ನಡೆದಿದೆ.
ಬೇಲೂರು ತಾಲ್ಲೂಕಿನ, ಕೆಳಬಿಕ್ಕೋಡು ಗ್ರಾಮದಲ್ಲಿ ಮಂಗಳವಾರ ಕಾಡಾನೆಗಳ ಹಿಂಡು ಗ್ರಾಮದೊಳಗೆಲ್ಲಾ ಓಡಾಡಿದ ಘಟನೆ ನಡೆದಿದೆ. ಗ್ರಾಮಸ್ಥರು ಕಾಡಾನೆಗಳ ಹಿಂಡು ಕಂಡು ದಿಕ್ಕಪಾಲಾಗಿ ಓಡಿದ್ದಾರೆ. ಗ್ರಾಮದ ಸಮೀಪವೇ ಮರಿಗಳು ಸೇರಿ ಸುಮಾರು ಇಪ್ಪತ್ತಕ್ಕೂ ಹೆಚ್ಚಿನ ಆನೆಗಳ ಗುಂಪು ಬೀಡುಬಿಟ್ಟಿವೆ.
ಈ ವೇಳೆ ಗಜಪಡೆಗಳು ಕಾಫಿ, ಜೋಳ, ಶುಂಠಿ, ಭತ್ತ ಬೆಳೆಗಳನ್ನು ಸಂಪೂರ್ಣ ನಾಶ ಮಾಡಿವೆ. ಬೆಳೆ ಕಳೆದುಕೊಂಡು ಅನ್ನದಾತರು ಕಂಗಾಲಾಗಿದ್ದಾರೆ. ಸ್ಥಳದಲ್ಲೇ ಅರಣ್ಯ ಇಲಾಖೆ ಇಟಿಎಫ್ ಸಿಬ್ಬಂದಿಗಳು ಮೊಕ್ಕಾಂ ಹೂಡಿದ್ದು, ಕಾಡಾನೆಗಳನ್ನು ಅರಣ್ಯಕ್ಕೆ ಓಡಿಸಲು ಹರಸಾಹಸಪಡುತ್ತಿದ್ದಾರೆ.
ಕಾಡಾನೆಗಳ ಹಾವಳಿಯಿಂದ ಭಯಭೀತರಾಗಿರುವ ಗ್ರಾಮಸ್ಥರು. ಮಾಲೀಕರು ಹಾಗೂ ಕಾರ್ಮಿಕರು ಕಾಫಿ ತೋಟಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದು, ಆನೆಗಳಿಂದ ಮುಂದಾಗುವ ಅನಾಹುತ ತಪ್ಪಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕ್ರಮವಹಿಸಿ ಆನೆಗಳ ಸ್ಥಳಾಂತರಕ್ಕೆ ಮುಂದಾಗಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.