ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಮೋದಿ ಸರ್ಕಾರದಡಿ ಭಯೋತ್ಪಾದನಾ ಘಟನೆಗಳು ಶೇ. 71 ರಷ್ಟು ಕಡಿಮೆಯಾಗಿವೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ರಾಜ್ಯಸಭೆಯಲ್ಲಿ ಬುಧವಾರ ಹೇಳಿದರು.
ಪ್ರಶ್ತೋತ್ತರ ಕಲಾಪದಲ್ಲಿ ಮಾತನಾಡಿದ ಸಚಿವರು, ಮೋದಿ ಸರ್ಕಾರ ಭಯೋತ್ಪಾದನೆಯ ಬಗ್ಗೆ ಶೂನ್ಯ ಸಹಿಷ್ಣುತೆ ನೀತಿ ಹೊಂದಿದ್ದು, ದೇಶದಲ್ಲಿ ಭಯೋತ್ಪಾದನೆ ಪ್ರಕರಣಗಳನ್ನು ಶೂನ್ಯಕ್ಕೆ ಇಳಿಸುವಲ್ಲಿ ನೆರವಾಗಿದೆ ಎಂದರು.
ಭಯೋತ್ಪಾದನೆ ಪ್ರಕರಣ ಎದುರಿಸಲು ತೆಗೆದುಕೊಳ್ಳಲಾಗುತ್ತಿರುವ ಹಲವಾರು ಕ್ರಮಗಳನ್ನು ವಿವರಿಸಿದ ಅವರು, ಹಿಂದೆ ಉಗ್ರರನ್ನು ವೈಭವೀಕರಿಸಿ ಅವರಿಗೆ ಉತ್ತಮ ಆಹಾರ ನೀಡಲಾಗುತ್ತಿತ್ತು. ಆದ್ರೆ ಇಂದು ಮೋದಿ ಸರ್ಕಾರ ಭಯೋತ್ಪಾದನೆಯ ಬಗ್ಗೆ ಶೂನ್ಯ ಸಹಿಷ್ಣುತೆಯ ನೀತಿಯೊಂದಿಗೆ ಕೆಲಸ ಮಾಡುತ್ತಿದೆ. ಇದರಿಂದಾಗಿ ದೇಶದಲ್ಲಿ ಯಾವುದೇ ಭಯೋತ್ಪಾದಕ ಘಟನೆಗಳು ನಡೆದಿಲ್ಲ. ಭಯೋತ್ಪಾದನಾ ಚಟುವಟಿಕೆಗಳಲ್ಲಿ ಶೇ.71 ರಷ್ಟು ಇಳಿಕೆಯಾಗಿದೆ. ಉಗ್ರರನ್ನು ಜೈಲು ಅಥವಾ ನರಕಕ್ಕೆ ಕಳುಹಿಸಲಾಗುತ್ತಿದೆ. ಮೋದಿ ಸರ್ಕಾರ ಭಯೋತ್ಪಾದನೆಯನ್ನು ಕೊನೆಗಾಣಿಸಲು ದೃಢ ಸಂಕಲ್ಪದೊಂದಿಗೆ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ರಾಷ್ಟ್ರೀಯ ತನಿಖಾ ಸಂಸ್ಥೆಯನ್ನು ನಿಯಂತ್ರಿಸುವ ಕಾಯ್ದೆಯಲ್ಲಿ ತಿದ್ದುಪಡಿ ಮಾಡಿದ ನಂತರ, ಲಂಡನ್ ಮತ್ತು ಒಟ್ಟಾವಾದಲ್ಲಿನ ಭಾರತೀಯ ಹೈಕಮಿಷನ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋದ ಕಾನ್ಸುಲೇಟ್ ಮೇಲಿನ ದಾಳಿ ಸೇರಿದಂತೆ ವಿದೇಶಿ ನೆಲದ ಮೇಲಿನ ಪ್ರಕರಣಗಳನ್ನು ತನಿಖೆ ನಡೆಸಲಾಗುತ್ತಿದೆ.
ಈ ವೇಳೆ ಎನ್‌ಐಎ ವಿರುದ್ಧದ ದೂರುಗಳನ್ನು ತಳ್ಳಿಹಾಕಿದ ಸಚಿವರು ಅವುಗಳನ್ನು ಆಧಾರರಹಿತ, ಅಮೆರಿಕದಿಂದ ಗಡೀಪಾರು ಮಾಡಿರುವ ಕೆಲವು ಅಕ್ರಮ ವಲಸಿಗರೊಂದಿಗೂ ಎನ್‌ಐಎ ಮಾತನಾಡಿದ್ದು, ಮಾನವ ಕಳ್ಳಸಾಗಣೆ ಪ್ರಕರಣಗಳೂ ಹೊರಬಿದ್ದಿದ್ದು, ಎಫ್‌ಐಆರ್ ದಾಖಲಾದ ನಂತರ ಅಂತಹ ಪ್ರಕರಣಗಳಲ್ಲಿ ಗಂಭೀರ ತನಿಖೆ ನಡೆಸಲಾಗುತ್ತಿದೆ. ಭಯೋತ್ಪಾದನೆ ಸಂಬಂಧಿತ ಪ್ರಕರಣಗಳಿಗೆ ಸಂಬಂಧಿಸಿದಂತೆ, ಜಮ್ಮು ಮತ್ತು ರಾಂಚಿಯಲ್ಲಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ ಮತ್ತು ಅಂತಹ 23 ನ್ಯಾಯಾಲಯಗಳು ದೇಶದ ಬೇರೆಡೆ ಇವೆ ಎಂದು ಹೇಳಿದರು.
ಇದುವರೆಗೆ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ ಅಥವಾ ಇತರ ಭಯೋತ್ಪಾದನೆ ಪ್ರಕರಣಗಳಡಿ 157 ಪ್ರಕರಣಗಳನ್ನು ನ್ಯಾಯಾಲಯಗಳು ನಿರ್ಧರಿಸಿವೆ. 2014 ರಿಂದ ಯುಎಪಿಎ ಅಡಿಯಲ್ಲಿ ಒಂಬತ್ತು ಸಂಘಟನೆಗಳನ್ನು ಭಯೋತ್ಪಾದಕ ಸಂಘಟನೆಗಳಾಗಿ ಗೊತ್ತುಪಡಿಸಲಾಗಿದೆ. 57 ವ್ಯಕ್ತಿಗಳನ್ನು ಭಯೋತ್ಪಾದಕರು ಎಂದು ಘೋಷಿಸಲಾಗಿದೆ. ಇದುವರೆಗೆ 23 ಸಂಘಟನೆಗಳನ್ನು ಕಾನೂನುಬಾಹಿರ ಎಂದು ಹೆಸರಿಸಲಾಗಿದೆ ಎಂದು ಮಾಹಿತಿ ನೀಡಿದರು.
NIA 652 ಪ್ರಕರಣಗಳನ್ನು ದಾಖಲಿಸಿದೆ ಮತ್ತು 516 ಪ್ರಕರಣಗಳನ್ನು ಚಾರ್ಜ್-ಶೀಟ್ ಮಾಡಲಾಗಿದೆ, ಎನ್‌ಐಎ ಈವರೆಗೆ 4,232 ಆರೋಪಿಗಳನ್ನು ಬಂಧಿಸಿದ್ದು, 625 ಮಂದಿಗೆ ಶಿಕ್ಷೆ ವಿಧಿಸಲಾಗಿದೆ ಎಂದು ನಿತ್ಯಾನಂದ ರೈ ಮಾಹಿತಿ ನೀಡಿದರು.