ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಭಾರತದ ಸೂಪರ್ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ‘ಜೈಲರ್ 2’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹೊಸ ಇತಿಹಾಸ ಸೃಷ್ಟಿಸುತ್ತಿದೆ. ಬಿಡುಗಡೆಯಾದ ಕೇವಲ ಮೂರೇ ದಿನಗಳಲ್ಲಿ ವಿಶ್ವಾದ್ಯಂತ ಒಟ್ಟು 317 ಕೋಟಿ ರೂಪಾಯಿಗಳ ಗಡಿ ದಾಟಿ ಭರ್ಜರಿ ಸಾಧನೆ ಮಾಡಿದೆ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಈ ಚಿತ್ರವು ತನ್ನ ಅದ್ಭುತ ಕಲೆಕ್ಷನ್ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದೆ.
ಪ್ರಸಿದ್ಧ ಬಾಕ್ಸ್ ಆಫೀಸ್ ಟ್ರ್ಯಾಕರ್ ‘ಸ್ಯಾಕ್ನಿಲ್ಕ್’ ವರದಿ ಪ್ರಕಾರ, ‘ಜೈಲರ್ 2’ ಸಿನಿಮಾ ಬಿಡುಗಡೆಯಾದ ಮೊದಲ ದಿನ ಭಾರತದಲ್ಲಿ ಭರ್ಜರಿ ಆರಂಭ ಪಡೆದು 59.70 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿತ್ತು. ಎರಡನೇ ದಿನ 37.10 ಕೋಟಿ ರೂ. ಗಳಿಸಿದ್ದ ಚಿತ್ರ, ಮೂರನೇ ದಿನವಾದ ಶನಿವಾರದಂದು ಬರೋಬ್ಬರಿ 47.80 ಕೋಟಿ ರೂ. ನೆಟ್ ಕಲೆಕ್ಷನ್ ಮಾಡುವ ಮೂಲಕ ಶೇಕಡಾ 28.8ರಷ್ಟು ಭಾರಿ ಏರಿಕೆ ಕಂಡಿದೆ. ಇದರೊಂದಿಗೆ ಭಾರತದ ಒಟ್ಟು ನೆಟ್ ಕಲೆಕ್ಷನ್ 144.60 ಕೋಟಿ ರೂ. ಹಾಗೂ ಒಟ್ಟು ಗಳಿಕೆ 169.65 ಕೋಟಿ ರೂ. ತಲುಪಿದೆ.
ಕೇವಲ ಭಾರತದಲ್ಲಷ್ಟೇ ಅಲ್ಲದೆ, ವಿದೇಶಿ ಮಾರುಕಟ್ಟೆಯಲ್ಲೂ ‘ಜೈಲರ್ 2’ ತನ್ನ ಪ್ರಭಾವ ಬೀರಿದೆ. ಮೂರನೇ ದಿನವೇ 47.50 ಕೋಟಿ ರೂ. ಒಟ್ಟು ಗಳಿಕೆ ಹರಿದುಬಂದಿದ್ದು, ಇದರೊಂದಿಗೆ ವಿದೇಶದ ಒಟ್ಟು ಗಳಿಕೆಯು 147.50 ಕೋಟಿ ರೂಪಾಯಿಗಳಿಗೆ ಮುಟ್ಟಿದೆ. ಭಾರತ ಮತ್ತು ವಿದೇಶಗಳ ಒಟ್ಟು ಮೊತ್ತವನ್ನು ಸೇರಿಸಿದರೆ, ಕೇವಲ ಮೂರು ದಿನಗಳಲ್ಲಿ ಚಿತ್ರದ ಜಾಗತಿಕ ಗಳಿಕೆ 317.15 ಕೋಟಿ ರೂ. ಗಡಿ ದಾಟಿದೆ.
ಈ ಯಶಸ್ಸಿನೊಂದಿಗೆ ‘ಜೈಲರ್ 2’ ಸಿನಿಮಾವು ರಜನಿಕಾಂತ್ ಅವರೇ ನಟಿಸಿದ್ದ ಹಳೆಯ ಬ್ಲಾಕ್ಬಸ್ಟರ್ ಚಿತ್ರಗಳಾದ ‘ಕಬಾಲಿ’ ಮತ್ತು ‘ರೋಬೋ’ ಸಿನಿಮಾಗಳ ಲೈಫ್ ಟೈಮ್ ಗಳಿಕೆಯ ದಾಖಲೆಯನ್ನು ಮೀರಿ ನಿಂತಿದೆ. ರಜನಿಕಾಂತ್ ಅವರ ವೃತ್ತಿಜೀವನದಲ್ಲಿ ಇದು ಅತಿ ಹೆಚ್ಚು ಗಳಿಕೆ ಮಾಡಿದ ನಾಲ್ಕನೇ ದೊಡ್ಡ ಚಿತ್ರವಾಗಿ ಹೊರಹೊಮ್ಮಿದೆ. ವೀಕೆಂಡ್ ಮುಗಿಯುವುದರೊಳಗೆ ಈ ಸಿನಿಮಾ ಇನ್ನಷ್ಟು ಹೊಸ ದಾಖಲೆಗಳನ್ನು ಬರೆಯುವುದರಲ್ಲಿ ಯಾವುದೇ ಸಂದೇಹವಿಲ್ಲ.



