ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಗಾಯಕಿ ಎಸ್. ಜಾನಕಿ ಅವರ ಧ್ವನಿಗೆ ಸಾಟಿಯೇ ಇಲ್ಲ. ಐದು ದಶಕಗಳ ಕಾಲ ಚಿತ್ರಗೀತೆ ಹಾಗೂ ಭಕ್ತಿ ಪ್ರಧಾನ ಹಾಡುಗಳ ಮೂಲಕ ಕನ್ನಡಿಗರ ಮನ ಗೆದ್ದಿರುವ ಇವರಿಗೆ ನಾದಬ್ರಹ್ಮ ಹಂಸಲೇಖ ಅವರು ‘ನಾದ ದೇವತೆ’ ಎಂದೇ ನಾಮಕರಣ ಮಾಡಿದ್ದಾರೆ. ‘ಗಜಮುಖನೇ ಗಣಪತಿಯೇ’, ‘ಶೃಂಗೇರಿ ಶ್ರೀ ಶಾರದೆ’ಯ ಭಕ್ತಿಗೀತೆಗಳು ಇಂದಿಗೂ ಮನೆಮನೆಗಳಲ್ಲಿ ಮೊಳಗುತ್ತಿವೆ.
ಜಾನಕಮ್ಮನಿಗೆ ನಡುಕ ಹುಟ್ಟಿಸಿದ್ದ ಆ ಒಂದು ಹಾಡು!
ಸುಮಾರು 20 ಭಾಷೆಗಳಲ್ಲಿ 48,000ಕ್ಕೂ ಹೆಚ್ಚು ಗೀತೆಗಳಿಗೆ ಧ್ವನಿಯಾಗಿರುವ ಜಾನಕಿ ಅವರಿಗೆ ತಮ್ಮ ವೃತ್ತಿಜೀವನದಲ್ಲೇ ಅತ್ಯಂತ ಕಠಿಣ ಎನಿಸಿದ್ದು 1977ರ ‘ಹೇಮಾವತಿ’ ಚಿತ್ರದ “ಶಿವ ಶಿವ ಎನ್ನದ ನಾಲಿಗೆ ಏಕೆ…” ಎಂಬ ಹಾಡು. ತೋಡಿ ಮತ್ತು ಅಭೋಗಿ ರಾಗಗಳ ಸಂಕೀರ್ಣ ಮಿಶ್ರಣವಿದ್ದ ಈ ಹಾಡನ್ನು ಹಾಡಲು ಆರಂಭದಲ್ಲಿ ಜಾನಕಮ್ಮ ಹೆದರಿದ್ದರಂತೆ. ಕೊನೆಗೆ ದೇವರಿಗೆ 100 ರೂ. ಹರಕೆ ಹೊತ್ತು, ಶ್ರದ್ಧೆಯಿಂದ ಹಾಡಿ ಯಶಸ್ವಿಯಾದರು. ಈ ಗಾಯನದ ಕ್ಲಿಷ್ಟತೆಯನ್ನು ದಿಗ್ಗಜ ಪಿಟೀಲು ವಾದಕ ಎಂ.ಎಸ್. ಗೋಪಾಲಕೃಷ್ಣನ್ ಅವರೇ ಶ್ಲಾಘಿಸಿದ್ದರು.
ಎಸ್‌ಪಿಬಿ-ಜಾನಕಿ ಜೋಡಿಯ ಸುವರ್ಣ ಯುಗ
ಕನ್ನಡದ ಸುವರ್ಣ ಕಾಲದಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಕಾಂಬಿನೇಷನ್ ಸಾರ್ವಕಾಲಿಕ ದಾಖಲೆ ಬರೆಯಿತು. ರಾಜನ್-ನಾಗೇಂದ್ರ, ಉಪೇಂದ್ರ ಕುಮಾರ್ ಹಾಗೂ ಹಂಸಲೇಖ ಅವರ ಅಮೋಘ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ಈ ಜೋಡಿಯ ಡ್ಯುಯೆಟ್ ಹಾಡುಗಳು ಇಂದಿಗೂ ಯುವ ಪೀಳಿಗೆಯ ಮೆಚ್ಚಿನ ಮೆಲೋಡಿಗಳಾಗಿವೆ. ಜಾನಕಮ್ಮನ ಧ್ವನಿ ಎಂದಿಗೂ ಕನ್ನಡದ ಅಮೂಲ್ಯ ಆಸ್ತಿ.



