ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲಿ ಬಹು ಭಾಷೆ ಕಲಾವಿದೆಯಾಗಿ ಅಪಾರ ಕೊಡುಗೆ ನೀಡಿದ ನಟಿ ಸೌಂದರ್ಯ.
19ರ ದಶಕದಲ್ಲಿ ಬಹುಬೇಡಿಕೆಯ ನಟಿಯಾಗಿದ್ದ ಇವರು ಕನ್ನಡ, ತಮಿಳು, ತೆಲುಗಿನಲ್ಲಿ ಪ್ರಸಿದ್ಧಿ ಪಡೆದು ಸೂಪರ್ ಸ್ಟಾರ್ ರಜನೀಕಾಂತ್ , ಅಮಿತಾಭ್ ಬಚ್ಚನ್ ವಿಷ್ಣುವರ್ಧನ್, ರವಿಚಂದ್ರನ್ ಸೇರಿದಂತೆ ಅನೇಕ ಪ್ರಸಿದ್ಧ ನಟರೊಂದಿಗೆ ತೆರೆ ಹಂಚಿಕೊಂಡಿದ್ದರು. ಇಂದು ಅವರು ನಮ್ಮೊಂದಿಗೆ ಇಲ್ಲವಾಗಿದ್ದರೂ ಅವರ ಸಿನಿಮಾಗಳ ಮೂಲಕ ಜೀವಂತವಾಗಿ ಅಭಿಮಾನಿಗಳ ಮನದಲ್ಲಿ ನೆಲೆಸಿದ್ದಾರೆ.
ಇವರೊಂದಿಗಿನ ಸಿನಿಮಾ ಜರ್ನಿ ಬಗ್ಗೆ ಬಹುಭಾಷಾ ನಟಿ ರಮ್ಯಾಕೃಷ್ಣ ಅವರು ಇತ್ತೀಚಿನ ಸಂದರ್ಶನ ಒಂದರಲ್ಲಿ ಮಾತನಾಡಿ, ಅವರ ಅಗಲುವಿಕೆ ಸಿನಿಮಾ ರಂಗಕ್ಕೆ ತುಂಬಲಾಗದ ನಷ್ಟವಿದ್ದಂತೆ ಎಂದು ಅವರು ಹೇಳಿದ್ದಾರೆ.
ನಟಿ ರಮ್ಯಾಕೃಷ್ಣ ಅವರು ತೆಲುಗು ಕಿರುತೆರೆಯ ಸಂದರ್ಶನ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ಸಂದರ್ಭದಲ್ಲಿ ಅವರು ತಮ್ಮ ಸಿನಿಮಾ ಜೀವನ ಹಾಗೂ ಇತರ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಇದೆ ವೇಳೆ ನಟಿ ಸೌಂದರ್ಯ ಜೊತೆಗಿನ ಒಡನಾಟದ ಬಗ್ಗೆ ಅವರು ಮಾತನಾಡಿ, ಪಡೆಯಪ್ಪ, ಅಮ್ಮೋರು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದ ತಮ್ಮ ಅನುಭವವನ್ನು ಅವರು ಹಂಚಿಕೊಂಡಿದ್ದಾರೆ.
ನಟಿ ಸೌಂದರ್ಯ ಅವರು ಸಿನಿಮಾ ಇಂಡಸ್ಟ್ರಿಯಲ್ಲಿ ಬಹುಮುಖ ಪ್ರತಿಭೆ ಹಾಗೂ ಅಭಿನಯದಿಂದ ಗುರುತಿಸಿಕೊಂಡವರು. ಹೆಸರಿಗೆ ತಕ್ಕದಾದ ರೂಪ ಅವರಲ್ಲಿತ್ತು. ಒಂದು ಚೂರು ಕೂಡ ಅಹಂ ಭಾವನೆ ಇರಲಿಲ್ಲ. ಒಳ್ಳೆಯದನ್ನು ಯಾರು ಹೇಳಿದರೂ ಕೇಳುತ್ತಿದ್ದರು. ಆಗ ಸಿನಿಮಾ ಇಂಡಸ್ಟ್ರಿಯಲ್ಲಿ ಅವರಿಗೆ ಒಳ್ಳೊಳ್ಳೆ ಸಿನಿಮಾ ಆಫರ್ ಬರುತ್ತಿತ್ತು. ಉತ್ತುಂಗದ ಹಂತಕ್ಕೆ ಸಿನಿಮಾ ಜರ್ನಿ ಮಾಡುತ್ತಿದ್ದಾಗಲೇ ಸೌಂದರ್ಯ ದೂರಾದಳು ಎಂದು ಅವರು ಬೇಸರ ವ್ಯಕ್ತಪಡಿಸಿದರು.
1995ರಲ್ಲಿ ಅಮ್ಮೋರು ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಮೊದಲ ಬಾರಿ ನಾನು ನಟಿ ಸೌಂದರ್ಯಳನ್ನು ನೋಡಿದ್ದೆ. ಆಗ ಆಕೆಯ ಸಹಜತೆ, ಸರಳತೆ ನನಗೆ ಬಹಳ ಇಷ್ಟ ವಾಗಿತ್ತು. ಸಿನಿಮಾ ರಂಗದಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದು ಪ್ರಶಸ್ತಿ ಪುರಸ್ಕಾರ ಅವರು ಪಡೆದಿದ್ದರು ಕೂಡ ಅವರು ಯಾರನ್ನೂ ಕೀಳಾಗಿ ಮಾತನಾಡುತ್ತಿರಲಿಲ್ಲ. ನನಗೆ ಆಕೆ ಆತ್ಮೀಯ ಸ್ನೇಹಿತೆಯಾಗಿದ್ದಳು. ಆಕೆಯ ಜಾಗ ತುಂಬಲು ಯಾರಿಂದಲೂ ಸಾಧ್ಯವಿಲ್ಲ, ಇಂದು ಅವರು ಇದ್ದಿದ್ದರೆ ಅನೇಕ ಸಿನಿಮಾದಲ್ಲಿ ನಟಿಸಿದ್ದನ್ನು ನಾವೆಲ್ಲರೂ ನೋಡಬಹುದಿತ್ತು ಎಂದು ರಮ್ಯಾಕೃಷ್ಣ ಅವರು ಹೇಳಿದ್ದಾರೆ.
ರಜನಿಕಾಂತ್ ಜೊತೆ ‘ಪಡೆಯಪ್ಪ’ ಚಿತ್ರದಲ್ಲಿ ಸೌಂದರ್ಯ ಜೊತೆ ನಟಿಸುವಾಗ ನನಗೆ ಬಹಳ ಬೇಸರವಾಗಿತ್ತು. ಸೌಂದರ್ಯ ಮುಖದ ಹತ್ತಿರ ಕಾಲಿಟ್ಟು ನಟಿಸಬೇಕಿತ್ತು ಅದಂತೂ ನನಗೆ ಈಗಲೂ ಬೇಸರ ತರಿಸುತ್ತದೆ.ಅವರು ಆ ಸಿನಿಮಾದಲ್ಲಿ ವಸುಂಧರ ಎಂಬ ಕೆಲಸದಾಕೆಯ ಮಗಳ ಪಾತ್ರದಲ್ಲಿ ಅಭಿನಯಿಸಿದ್ದು ಅವಳನ್ನು ಕೀಳಾಗಿ ಕಾಣುವುದೇ ನನ್ನ ಪಾತ್ರವಾಗಿತ್ತು. ತೆರೆ ಮೇಲೆ ಆ ಸೀನ್ ಚೆನ್ನಾಗಿ ಮೂಡಿಬಂದರು ತೆರೆ ಹಿಂದೆ ಆ ಸೀನ್ ಅಭಿನಯಿಸುವುದೇ ಕಷ್ಟವಾಗಿತ್ತು. ಅವರ ಮುಖದ ಮೇಲೆ ಕಾಲಿಟ್ಟು ನಟಿಸಿದ್ದಕ್ಕೆ ಕೆಲ ದಿನಗಳ ಕಾಲ ಅದೇ ಬೇಸರದಲ್ಲಿದ್ದೆ. ಆದರೆ ಸೌಂದರ್ಯ ಮಾತ್ರ ಅದು ಪಾತ್ರವಷ್ಟೇ ಅದನ್ನು ಮನಸ್ಸಿಗೆ ತೆಗೆದುಕೊಳ್ಳಬೇಡಿ ಎಂದು ಸಲಹೆ ನೀಡುತ್ತಿದ್ದರು. ಅಂತಹ ಒಳ್ಳೆ ನಟಿ , ಸ್ನೇಹಿತೆ ಇಂದು ನಮ್ಮೊಂದಿಗಿಲ್ಲ ಎಂಬ ಬೇಸರ ಸದಾ ಇರುದಾಗಿ ಅವರು ಹೇಳಿದರು.

                                    