May 17, 2026
Sunday, May 17, 2026
spot_img

ಆ ಮೂರ್ಖನ ಟ್ವೀಟ್ ನಮಗಲ್ಲ: ಸಚಿವರಿಗೆ ‘ಮೂರ್ಖ’ ಪಟ್ಟ ಕಟ್ಟಿದ ಇರಾನ್ ನೌಕಾಪಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇರಾನ್ ದೇಶದಲ್ಲಿ ಸದ್ಯ ಸರ್ಕಾರದ ಮಾತಿಗಿಂತ ಸೇನೆಯ ದರ್ಪವೇ ಮೇಲುಗೈ ಸಾಧಿಸುತ್ತಿದೆಯೇ ಎಂಬ ಅನುಮಾನ ಕಾಡತೊಡಗಿದೆ. ತನ್ನದೇ ದೇಶದ ವಿದೇಶಾಂಗ ಸಚಿವರನ್ನು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ನೌಕಾಪಡೆಯು ಸಾರ್ವಜನಿಕವಾಗಿಯೇ ‘ಮೂರ್ಖ’ ಎಂದು ಕರೆದು ಅವಮಾನಿಸಿರುವ ಘಟನೆ ವರದಿಯಾಗಿದೆ.

ಲೆಬನಾನ್‌ನಲ್ಲಿ ಕದನ ವಿರಾಮ ಏರ್ಪಟ್ಟ ಹಿನ್ನೆಲೆಯಲ್ಲಿ ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಾಘ್ಚಿ ಅವರು ‘ಎಕ್ಸ್’ ಮೂಲಕ ಮಹತ್ವದ ಘೋಷಣೆ ಮಾಡಿದ್ದರು. ಹಾರ್ಮುಜ್ ಜಲಸಂಧಿಯನ್ನು ಎಲ್ಲಾ ವಾಣಿಜ್ಯ ಹಡಗುಗಳ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದರು. ಈ ಹೇಳಿಕೆಯನ್ನು ನಂಬಿದ ಜಾಗತಿಕ ಹಡಗುಗಳು ಜಲಸಂಧಿಯನ್ನು ದಾಟಲು ಮುಂದಾದಾಗ ಐಆರ್‌ಜಿಸಿ ಸೇನೆ ಅವುಗಳನ್ನು ತಡೆದಿದೆ.

ಸಂಘರ್ಷದ ವೇಳೆ ಹಡಗಿನ ಕ್ಯಾಪ್ಟನ್ ಸಚಿವರ ಆದೇಶದ ಬಗ್ಗೆ ಪ್ರಸ್ತಾಪಿಸಿದಾಗ, ಐಆರ್‌ಜಿಸಿ ರೇಡಿಯೋ ಸಿಗ್ನಲ್ ಮೂಲಕ ಅತ್ಯಂತ ಉದ್ಧಟತನದ ಉತ್ತರ ನೀಡಿದೆ. “ನಾವು ಹಡಗುಗಳ ಸಂಚಾರಕ್ಕೆ ಅನುಮತಿ ನೀಡುವುದು ನಮ್ಮ ಪರಮೋಚ್ಚ ನಾಯಕನ ಆದೇಶದ ಮೇರೆಗೆ ಮಾತ್ರ, ಯಾರೋ ಒಬ್ಬ ‘ಮೂರ್ಖ’ ಮಾಡಿದ ಟ್ವೀಟ್‌ಗಲ್ಲ” ಎಂದು ತಿರುಗೇಟು ನೀಡಿದೆ. ಅಲ್ಲದೆ, ಜಲಸಂಧಿಯನ್ನು ಇನ್ನೂ ಮುಚ್ಚಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಸಚಿವರಿಗೇ ಬೆಲೆ ನೀಡದ ಸೇನೆಯ ಈ ವರ್ತನೆ ಜಾಗತಿಕ ಮಟ್ಟದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಇರಾನ್ ಸರ್ಕಾರ ಮತ್ತು ಸೇನೆಯ ನಡುವೆ ಸಮನ್ವಯದ ಕೊರತೆ ಎದ್ದುಕಾಣುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ ಇರಾನ್ ಸರ್ಕಾರದ ಜೊತೆ ನಡೆಸುವ ಯಾವುದೇ ಅಂತಾರಾಷ್ಟ್ರೀಯ ಸಂಧಾನ ಮಾತುಕತೆಗಳು ಯಶಸ್ವಿಯಾಗಬಲ್ಲವೇ ಎಂಬ ಆತಂಕ ಎದುರಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !