ಹೊಸದಿಗಂತ ವರದಿ, ಮದ್ದೂರು :
ಅಪ್ರಾಪ್ತ ಮಕ್ಕಳಿಗೆ ದ್ವಿಚಕ್ರ ವಾಹನ ಕೊಡುವ ಪಾಲಕರಿಗೆ ಎಚ್ಚರಿಕೆ ಗಂಟೆ ಎಂಬಂತೆ, ಅಪ್ರಾಪ್ತ ಮಗನಿಗೆ ಸ್ಕೂಟರ್ ಕೊಟ್ಟ ತಾಯಿಗೆ ಪಟ್ಟಣದ ಜೆ.ಎಂ.ಎಫ್.ಸಿ ಪ್ರಧಾನ ಸಿವಿಲ್ ನ್ಯಾಯಾಲಯ 25 ಸಾವಿರ ರೂ.ಗಳ ದೊಡ್ಡ ಮೊತ್ತದ ದಂಡವನ್ನು ವಿಧಿಸಿದೆ.
ಅಪ್ರಾಪ್ತ ಬಾಲಕನೋರ್ವ ಆಕ್ಟೀವ್ ಹೋಂಡಾ ದ್ವಿಚಕ್ರ ವಾಹನ ಚಾಲನೆ ಮಾಡಿಕೊಂಡು ರಾಮನಗರ ಜಿಲ್ಲೆಯಿಂದ ಮಂಡ್ಯ ಕಡೆಗೆ ಹೋಗುತ್ತಿದ್ದ ಬಾಲಕನು ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಬಳಿ ಸಂಚಾರ ನಿಯಮ ಉಲ್ಲಂಘಿಸಿ ಚಲಿಸುವ ವಾಹನಗಳ ತಪಾಸಣೆ ನಡೆಸುತ್ತಿದ್ದರು.
ಪಟ್ಟಣದ ಸಂಚಾರ ಠಾಣೆ ಪಿ.ಎಸ್.ಐ ಮಹೇಶ್ ಮತ್ತು ಸಿಬ್ಬಂದ ವಾಹನ ತಪಾಸಣೆ ಮಾಡುತ್ತಿದ್ದ ಸಂದರ್ಭದಲ್ಲಿ ಅಪ್ರಾಪ್ತ ಬಾಲಕನೋರ್ವ ದ್ವಿಚಕ್ರ ವಾಹನದಲ್ಲಿ ಸಂಚರಿಸುವುದನ್ನು ಪತ್ತೆ ಹಚ್ಚಿ ಮೋಟಾರ್ ವಾಹನ ಕಾಯ್ದೆ ಉಲ್ಲಂಘನೆ ಆರೋಪದ ಹಿನ್ನಲೆಯಲ್ಲಿ ಸ್ಕೂಟರ್‌ನ್ನು ವಶಕ್ಕೆ ಪಡೆದು ದ್ವಿಚಕ್ರ ವಾಹನ ಮಾಲೀಕರಾದ ರಾಮನಗರ ಜಿಲ್ಲೆ, ಬಿಡದಿ ನಗರದ ಲಕ್ಷ್ಮೀಕಾಂತ್ ಅವರ ಪತ್ನಿ ಮಧುವಂತಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದರು. ಪ್ರಕರಣ ವಿಚಾರಣೆ ನಡೆಸಿದ ಪ್ರಧಾನ ಸಿವಿಲ್ ನ್ಯಾಯಾಧೀಶ ಅಜಿತ್ ದೇವರಮನಿ ಅವರು ಸ್ಕೂಟರ್ ಮಾಲೀಕರಾದ ಮಧುವಂತಿ ಅವರಿಗೆ 25 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಪಟ್ಟಣದಲ್ಲಿ ಅಪ್ರಾಪ್ತ ಮಕ್ಕಳಿಗೆ ದ್ವಿಚಕ್ರ ವಾಹನ ಚಲಾಯಿಸಲು ನೀಡುವ ಪಾಲಕರಿಗೆ ಎಚ್ಚರಿಕೆ ಘಂಟೆಯಾಗಿದ್ದು 18 ವರ್ಷ ತುಂಬದ ವಯೋಮಾನದವರು ದ್ವಿಚಕ್ರ ವಾಹನವನ್ನು ಚಲಾಯಿಸುವುದು ಶಿಕ್ಷಾರ್ಹ ಅಪರಾಧವಾಗಿದ್ದು ಪಟ್ಟಣ ಹಾಗೂ ತಾಲೂಕಿನಲ್ಲಿ ಸಂಚರಿಸುವ ಅಪ್ರಾಪ್ತ ಮಕ್ಕಳ ಪಾಲಕರಿಗೆ ದಂಡ ವಿಧಿಸಲಿದ್ದು ಇದನ್ನರಿತು ಪಾಲಕರು ಮಕ್ಕಳಿಗೆ ವಾಹನ ನೀಡದಂತೆ ಎಚ್ಚರಿಕೆ ನೀಡಿದ್ದಾರೆ.