ಹೊಸದಿಗಂತ ವರದಿ ಚಿತ್ರದುರ್ಗ:
ಕಳೆದ ಮೂರು ದಿನಗಳಿಂದ ನಗರದ ಆನೆ ಬಾಗಿಲು ಬಳಿ ಇರುವ ಜಗದ್ಗುರು ಶ್ರೀಮನ್ ಮಧ್ವಾಚಾರ್ಯ ಮೂಲಮಹಾಸಂಸ್ಥಾನ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳವರ ಶಾಖಾಮಠ, ಚಿತ್ರದುರ್ಗದ ಶ್ರೀಗುರು ರಾಯರ ಮಠದಲ್ಲಿ ಶ್ರೀಗುರು ರಾಯರ 355ನೇ ಆರಾಧನಾ ಮಹೋತ್ಸವ ಅತ್ಯಂತ ವೈಭವದಿಂದ ನಡೆಯಿತು.
ಭಕ್ತರ ಪಾಲಿಗೆ ರಾಯರು ‘ಕಲಿಯುಗ ಕಾಮಧೇನು’, ‘ಕಲಿಯುಗ ಕಲ್ಪತರು’ ಎಂಬ ಬಿರುದುಗಳಿಂದ ಪ್ರಸಿದ್ಧರಾಗಿದ್ದಾರೆ. ಕಷ್ಟದಲ್ಲಿರುವವರಿಗೆ ಆಶ್ರಯ ನೀಡುವ ಗುರು, ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ದಯಾಮಯ ಸಂತ ಎಂಬ ಭಾವನೆ ಈ ಹೆಸರುಗಳ ಹಿಂದೆ ಇದೆ. ರಾಯರ ಭಕ್ತಿಯ ವ್ಯಾಪ್ತಿ ಇಂದು ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ರಾಯರ ಕರುಣೆ ಎಲ್ಲರಿಗೂ ಎಂಬ ಭಾವನೆ ಅವರ ಭಕ್ತಿಪರಂಪರೆಯಲ್ಲಿ ಪ್ರಮುಖವಾಗಿದೆ. ಮಂತ್ರಾಲಯ ಇಂದು ಕೇವಲ ಧಾರ್ಮಿಕ ಕೇಂದ್ರವಾಗಿರದೆ, ವೈದಿಕ ಅಧ್ಯಯನ, ಅನ್ನದಾನ, ಗುರುಸೇವೆ ಹಾಗೂ ಆಧ್ಯಾತ್ಮಿಕ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿದೆ.
ಮೂರು ದಿನಗಳ ಕಾಲ ನಡೆಯಲಿರುವ ಮಹೋತ್ಸವ
ಶ್ರೀಗುರು ರಾಯರ 355ನೇ ಆರಾಧನಾ ಮಹೋತ್ಸವದ ಅಂಗವಾಗಿ ಶುಕ್ರವಾರ ಸಂಜೆ ರಾಯರ ಮಠದಲ್ಲಿ ಮೂರು ದಿನಗಳ ಕಾಲ ನಡೆಯುವ ಮಹೋತ್ಸವದಲ್ಲಿ ಬಳಸುವ ದವಸ-ಧಾನ್ಯಗಳ ಪೂಜೆ ನೆರವೇರಿಸಲಾಯಿತು. ಸಂಜೆ ಗೋಪೂಜೆ, ಧ್ವಜಾರೋಹಣ ಹಾಗೂ ಧನ-ಧಾನ್ಯ ಲಕ್ಷ್ಮೀ ಪೂಜೆ ನಡೆಸಲಾಯಿತು. ಪ್ರಾರಂಭದ ದಿನವಾದ ಶುಕ್ರವಾರ ಶ್ರೀ ಪರಾಭವನಾಮ ಸಂವತ್ಸರ, ಶ್ರಾವಣ ಮಾಸ, ಕೃಷ್ಣಪಕ್ಷ, ಪ್ರತಿಪದೆಯಂದು ಶ್ರೀಗುರು ರಾಯರ 355ನೇ ಆರಾಧನಾ ಮಹೋತ್ಸವದ ಪೂರ್ವಾರಾಧನೆ ನೆರವೇರಿತು. ಈ ಸಂದರ್ಭದಲ್ಲಿ ರಾಯರ ಬೃಂದಾವನವನ್ನು ವಿವಿಧ ರೀತಿಯ ಹೂವು ಹಾಗೂ ಕೇದಿಗೆಯಿಂದ ಅಲಂಕರಿಸಲಾಗಿತ್ತು.
ಎರಡನೇ ದಿನ ಶ್ರೀಗುರು ರಾಯರ ಮಧ್ಯಾರಾಧನೆ ನಡೆಯಿತು. ಕಾರ್ಯಕ್ರಮದ ಅಂಗವಾಗಿ ರಾಯರ ಬೃಂದಾವನವನ್ನು ವಿವಿಧ ರೀತಿಯ ಹೂವುಗಳಿಂದ ಅಲಂಕರಿಸಲಾಗಿತ್ತು. ಮೂರು ದಿನಗಳ ಕಾಲ ಬೆಳಿಗ್ಗೆ ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ, ಅಷ್ಟೋತ್ತರದೊಂದಿಗೆ ಕ್ಷೀರಾಭಿಷೇಕ ಸಹಿತ ಪಂಚಾಮೃತ ಪಾದಪೂಜೆ, ಕನಕಾಭಿಷೇಕ, ಅರ್ಚನೆ ಹಾಗೂ ಹಸ್ತೋದಕ ಕಾರ್ಯಕ್ರಮಗಳು ನಡೆದವು. ಬೆಳಿಗ್ಗೆ ಯಜುರ್ವೇದ ನಿತ್ಯ ನೂತನ ಉಪಾಕರ್ಮ ಹಾಗೂ ಸತ್ಯನಾರಾಯಣ ಪೂಜೆಯನ್ನೂ ನಡೆಸಲಾಯಿತು.
ರಾಯರ ಮಹಾರಥೋತ್ಸವ
ಆರಾಧನೆಯ ಮೂರನೇ ದಿನವಾದ ಸೋಮವಾರ ಶ್ರೀಗುರುರಾಜರ ಉತ್ತರಾರಾಧನೆಯ ಅಂಗವಾಗಿ ನಿರ್ಮಾಲ್ಯ ವಿಸರ್ಜನೆ, ಅಷ್ಟೋತ್ತರದೊಂದಿಗೆ ಕ್ಷೀರಾಭಿಷೇಕ ಸಹಿತ ಪಂಚಾಮೃತ ಪೂಜೆ ನೆರವೇರಿತು. ತದನಂತರ ರಾಯರ ಮಠದ ಮುಂಭಾಗದಲ್ಲಿ ಮಹಾರಥೋತ್ಸವ ನಡೆಸಲಾಯಿತು. ಈ ಸಂದರ್ಭದಲ್ಲಿ ರಥವನ್ನು ವಿವಿಧ ರೀತಿಯ ಹೂವುಗಳಿಂದ ಅಲಂಕರಿಸಿ, ಅದರಲ್ಲಿ ದೇವರನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ಬಳಿಕ ಭಕ್ತಾಧಿಗಳು ರಥವನ್ನು ಎಳೆದರು.
ಮಠದ ಆವರಣದಿಂದ ಆನೆ ಬಾಗಿಲು ಮೂಲಕ ರಥವನ್ನು ಸಂತೇಪೇಟೆ ವೃತ್ತಕ್ಕೆ ತರಲಾಯಿತು. ಅಲ್ಲಿಂದ ಮರಳಿ ರಾಯರ ಮಠವನ್ನು ತಲುಪಿತು. ದಾರಿಯುದ್ದಕ್ಕೂ ಭಕ್ತರು ರಾಯರ ನಾಮಸ್ಮರಣೆ ಮಾಡುತ್ತಾ ಸಾಗುತ್ತಿದ್ದ ದೃಶ್ಯ ಕಂಡುಬಂದಿತು. ಈ ವೇಳೆ ನಾಗಸ್ವರ, ಚಂಡೆ ಸೇರಿದಂತೆ ವಿವಿಧ ಜಾನಪದ ವಾದ್ಯಗಳು ಮೆರವಣಿಗೆಗೆ ಸಾಥ್ ನೀಡಿದವು.
ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್, ಮಾಜಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಜಿ.ಪಂ. ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಬಿಜೆಪಿ ಮುಖಂಡರಾದ ಡಾ. ಸಿದ್ಧಾರ್ಥ ಗುಂಡಾರ್ಪಿ, ಬ್ರಾಹ್ಮಣ ಸಂಘದ ಅಧ್ಯಕ್ಷ ಪಿ.ಎಸ್. ಮಂಜುನಾಥ್, ಶ್ರೀಗುರುರಾಜ ಸೇವಾ ಸಂಘದ ಅಧ್ಯಕ್ಷ ಜಿ.ಎ. ದೀಪಾನಂದ, ಶ್ರೀ ಹರಿವಾಯು ಗುರುಸೇವಾ ಟ್ರಸ್ಟ್ನ ಅಧ್ಯಕ್ಷ ಎಸ್.ಎನ್. ದ್ವಾರಕನಾಥ್ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.



