ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ನೌಕಾಪಡೆಯ ಸಾಮರ್ಥ್ಯಕ್ಕೆ ಮತ್ತಷ್ಟು ಬಲ ನೀಡುವುದಕ್ಕೆ ‘INS ನಿಪುಣ್’ ಆಳ ಸಮುದ್ರ ಡೈವಿಂಗ್ ಹಡಗು ಅಧಿಕೃತವಾಗಿ ನೌಕಾಪಡೆಗೆ ಸೇರ್ಪಡೆಗೊಂಡಿತು.
ಮುಂಬೈನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಅವರ ಸಮ್ಮುಖದಲ್ಲಿ INS ನಿಪುಣ್ ಅನ್ನು ಸೇವೆಗೆ ನಿಯೋಜಿಸಲಾಯಿತು.
ಇದರ ವಿಶೇಷತೆ ಏನು ಗೊತ್ತಾ?
ಕ್ಲಿಷ್ಟಕರವಾದ ನೀರೊಳಗಿನ ಕಾರ್ಯಾಚರಣೆಗಳು, ಸಬ್‌ಮೆರಿನ್ ರಕ್ಷಣಾ ಕಾರ್ಯ, ಸಮುದ್ರದೊಳಗಿನ ಪರಿಶೀಲನೆ ಹಾಗೂ ರಕ್ಷಣಾ ಕಾರ್ಯಗಳಿಗೆ ಈ ಹಡಗು ನೆರವಾಗಲಿದೆ. ಈ ಹಡಗು 300 ಮೀಟರ್ ಆಳದವರೆಗೂ ಡೈವಿಂಗ್ ಕಾರ್ಯಾಚರಣೆಗಳನ್ನು ಬೆಂಬಲಿಸುವ ಸಾಮರ್ಥ್ಯ ಹೊಂದಿದೆ. ಇದು ಸುಮಾರು 119.4 ಮೀಟರ್ ಉದ್ದ ಹೊಂದಿರುವ ಹಡಗು 10,500 ಟನ್‌ಗಳ ಸಾಮರ್ಥ್ಯ ಹೊಂದಿದೆ.
ಇನ್ನೊಂದು ವಿಶೇಷತೆ ಅಂದರೆ ಇದು ದೇಶಿಯ ವಿನ್ಯಾಸದಲ್ಲಿ ನಿರ್ಮಾಣಗೊಂಡಿದ್ದು, ಹಿಂದೂಸ್ತಾನ್ ಶಿಪ್‌ಯಾರ್ಡ್ ಮತ್ತು ದೇಶೀಯ ಕೈಗಾರಿಕಾ ಸಂಸ್ಥೆಗಳ ನಡುವಿನ ಸಹಕಾರದ ನಿರ್ಮಾಣವಾಗಿದೆ.
INS ನಿಸ್ತಾರ್ ಗೆ ಜೋಡಿ
ಕಳೆದ ವರ್ಷ ನೌಕಾಪಡೆಗೆ INS ನಿಸ್ತಾರ್ ಆಳ ಸಮುದ್ರ ಡೈವಿಂಗ್ ಹಡಗು ನಿಯೋಜನೆಗೊಂಡಿತ್ತು. ಈ ವರ್ಷ INS ನಿಪುಣ್ ಸೇರ್ಪಡೆಗೊಂಡಿದ್ದು, ಎರಡು ಆಳ ಸಮುದ್ರ ಡೈವಿಂಗ್ ಹಡಗು ಭಾರತದ ನೌಕಾಪಡೆಯ ಶಕ್ತಿ ಹೆಚ್ಚಿಸಿದೆ.
INS ನಿಪುಣ್ ಅನ್ನು ಸಮುದ್ರ ಪರೀಕ್ಷೆಗಳು ಹಾಗೂ ಡೈವಿಂಗ್ ವ್ಯವಸ್ಥೆಗಳು ಮತ್ತು ರಿಮೋಟ್ ಆಪರೇಟೆಡ್ ವೆಹಿಕಲ್ಸ್‌ಗಳ ಕಾರ್ಯಕ್ಷಮತೆಯನ್ನು ಯಶಸ್ವಿಯಾಗಿ ಪರೀಕ್ಷಿಸಿದ ಬಳಿಕ ಸೇವೆಗೆ ನಿಯೋಜಿಸಲಾಗಿದೆ. ನೀರೊಳಗಿನ ರಕ್ಷಣಾ ಕಾರ್ಯಾಚರಣೆ ಹಾಗೂ ಸಾಲ್ವೇಜ್ ಸಾಮರ್ಥ್ಯದಿಂದಾಗಿ ಸ್ನೇಹಪರ ರಾಷ್ಟ್ರಗಳಿಗೆ ಅಗತ್ಯವಿದ್ದಾಗ ಸಹಾಯ ಒದಗಿಸುವಲ್ಲಿಯೂ ಈ ಹಡಗು ಪ್ರಮುಖ ಪಾತ್ರ ವಹಿಸಲಿದೆ.



