ಹೊಸದಿಗಂತ ಡಿಜಿಟಲ್ ಡೆಸ್ಕ್:
ಇದೇ ಏಪ್ರಿಲ್ 1 ರಿಂದ ದೇಶಾದ್ಯಂತ ಜನಗಣತಿ ಪ್ರಕ್ರಿಯೆ ಆರಂಭವಾಗಲಿದೆ. ಇದು ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರದ 8ನೇ ಜನಗಣತಿಯಾಗಿದೆ ಎಂದು ಭಾರತದ ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತ ಮೃತ್ಯುಂಜಯ ಕುಮಾರ್ ನಾರಾಯಣ್ ಅವರು ತಿಳಿಸಿದ್ದಾರೆ.
ನವದೆಹಲಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿಯ ಜನಗಣತಿಯನ್ನು ಒಟ್ಟು ಎರಡು ಹಂತಗಳಲ್ಲಿ ನಡೆಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಮೊದಲ ಹಂತದಲ್ಲಿ ಏಪ್ರಿಲ್ 1 ರಿಂದ ಸೆಪ್ಟೆಂಬರ್ 30ರವರೆಗೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮನೆಗಳ ಪಟ್ಟಿ ಮಾಡುವಿಕೆ ಮತ್ತು ಸ್ವಯಂಗಣತಿ ಕಾರ್ಯಗಳು ನಡೆಯಲಿವೆ. ಇನ್ನು ಎರಡನೇ ಹಂತದಲ್ಲಿ ಅತ್ಯಂತ ಪ್ರಮುಖವಾದ ಜಾತಿ ಗಣತಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ವಿವರಿಸಿದ್ದಾರೆ.
ದೇಶದ ಭವಿಷ್ಯದ ಯೋಜನೆಗಳ ರೂಪಿಸುವಿಕೆಗೆ ಈ ಜನಗಣತಿಯು ದಿಕ್ಸೂಚಿಯಾಗಲಿದ್ದು, ಸಾರ್ವಜನಿಕರು ನಿಖರ ಮಾಹಿತಿ ನೀಡುವ ಮೂಲಕ ಸಹಕರಿಸಬೇಕು ಎಂದು ಈ ಸಂದರ್ಭದಲ್ಲಿ ಮನವಿ ಮಾಡಲಾಗಿದೆ.



