July 10, 2026
Friday, July 10, 2026
spot_img

47 ವರ್ಷಗಳ ಹಗೆತನಕ್ಕೆ ಕ್ಲೈಮ್ಯಾಕ್ಸ್? ಇರಾನ್ ಮೂಲಸೌಕರ್ಯ ಧ್ವಂಸ ಮಾಡುವುದಾಗಿ ಗುಡುಗಿದ ಟ್ರಂಪ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ಈಗ ತಾರಕಕ್ಕೇರಿದೆ. ಹಾರ್ಮುಜ್ ಜಲಸಂಧಿಯನ್ನು ಮುಚ್ಚಿರುವ ಇರಾನ್ ಕ್ರಮಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆಂಡಾಮಂಡಲವಾಗಿದ್ದು, “ತಕ್ಷಣ ಜಲಸಂಧಿ ತೆರೆಯದಿದ್ದರೆ ಇರಾನ್ ಸರ್ವನಾಶವಾಗಲಿದೆ” ಎಂದು ನೇರ ಎಚ್ಚರಿಕೆ ನೀಡಿದ್ದಾರೆ.

ತಮ್ಮ ನೆಚ್ಚಿನ ಸಾಮಾಜಿಕ ಜಾಲತಾಣ ‘ಟ್ರೂಥ್ ಸೋಶಿಯಲ್’ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಇರಾನ್ ವಿರುದ್ಧ ಅತ್ಯಂತ ಕಠಿಣ ಪದಬಳಕೆ ಮಾಡಿದ್ದಾರೆ.

ಹಾರ್ಮುಜ್ ಜಲಸಂಧಿಯನ್ನು ತಕ್ಷಣವೇ ಮುಕ್ತಗೊಳಿಸದಿದ್ದರೆ, ಇರಾನ್‌ನ ಎಲ್ಲಾ ವಿದ್ಯುತ್ ಸ್ಥಾವರಗಳು, ತೈಲ ಬಾವಿಗಳು ಮತ್ತು ಪ್ರಮುಖ ಖಾರ್ಗ್ ದ್ವೀಪವನ್ನು ಸ್ಫೋಟಿಸಿ ಸಂಪೂರ್ಣವಾಗಿ ನಾಶಪಡಿಸುವುದಾಗಿ ಟ್ರಂಪ್ ಗುಡುಗಿದ್ದಾರೆ.

ಇರಾನ್ ವಿರುದ್ಧದ ಯುದ್ಧವನ್ನು ಕೊನೆಗೊಳಿಸಲು ಅಮೆರಿಕ ಗಂಭೀರ ಚಿಂತನೆ ನಡೆಸುತ್ತಿದೆ. ಆದರೆ, ಇರಾನ್ ಶೀಘ್ರವಾಗಿ ಒಪ್ಪಂದಕ್ಕೆ ಬರದಿದ್ದರೆ ಅದರ ಮೂಲಸೌಕರ್ಯವನ್ನೇ ಧೂಳೀಪಟ ಮಾಡುವುದು ನಿಶ್ಚಿತ ಎಂದಿದ್ದಾರೆ.

“ಕಳೆದ 47 ವರ್ಷಗಳಿಂದ ಇರಾನ್ ನಡೆಸುತ್ತಿರುವ ಭಯೋತ್ಪಾದನಾ ಆಡಳಿತದಿಂದ ನಮ್ಮ ಸೈನಿಕರು ಬಲಿಯಾಗಿದ್ದಾರೆ. ಇಲ್ಲಿಯವರೆಗೆ ನಾವು ತಾಳ್ಮೆಯಿಂದ ಇವುಗಳ ಮೇಲೆ ದಾಳಿ ಮಾಡಿರಲಿಲ್ಲ. ಆದರೆ ಈಗ ನಡೆಸುವ ದಾಳಿ ಅಂತಿಮ ಮತ್ತು ಭೀಕರವಾಗಿರುತ್ತದೆ” ಎಂದು ಟ್ರಂಪ್ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

ಈ ಎಚ್ಚರಿಕೆಯು ಅರಬ್ ರಾಷ್ಟ್ರಗಳು ಸೇರಿದಂತೆ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಇರಾನ್ ಈಗ ಯಾವ ಹೆಜ್ಜೆ ಇಡಲಿದೆ ಎಂಬುದು ಕುತೂಹಲ ಮೂಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !