ಕೋರ್ಟ್ ನ ಕಿಟಕಿ ಗಾಜು ಹೊಡೆದು ಹುಚ್ಚಾಟ ಮೆರೆದ ಆರೋಪಿ

ಹೊಸದಿಗಂತ ವರದಿ , ಚಿತ್ರದುರ್ಗ:

ವಿಚಾರಣಾಧೀನ ಖೈದಿಯೊಬ್ಬ ನ್ಯಾಯಾಲಯದಲ್ಲಿ ಹುಚ್ಚಾಟವಾಡಿ, ಕೋರ್ಟ್‌ನ ಕಿಟಕಿ ಗ್ಲಾಸ್ ಹೊಡೆದು, ಕೂಗಾಟ ಮಾಡಿರುವ ಘಟನೆ ಶುಕ್ರವಾರ ಸಿಜೆಎಂ ನ್ಯಾಯಾಲಯದಲ್ಲಿ ನಡೆದಿದೆ. ಸಮ್ಮು ಅಲಿಯಾಸ್ ಬಷೀರ್ ನ್ಯಾಯಾಲದಲ್ಲಿ ಗಾಜು ಹೊಡೆದು ಹುಚ್ಚಾಟ ಆಡಿದ ಆರೋಪಿ.

ಚಿತ್ರದುರ್ಗದ ನಗರ ಠಾಣೆ ವ್ಯಾಪ್ತಿಯಲ್ಲಿನ ಬ್ಯಾಂಕ್ ಕಾಲೋನಿಯಲ್ಲಿ ನಡೆದ ಮನೆ ರಾಬರಿ ಪ್ರಕರಣದಲ್ಲಿ ಆರೋಪಿಯಾದ ಸಮ್ಮು ಅಲಿಯಾಸ್ ಬಷೀರ್ ಕಳೆದ ಕೆಲವು ವರ್ಷಗಳ ಹಿಂದೆ ಬಂಧಿತನಾಗಿ ನ್ಯಾಯಲಯಕ್ಕೆ ವಿಚಾರಣೆಗೆ ಹಾಜರಾಗುತ್ತಿದ್ದ. ಎಂದಿನಂತೆ ಶುಕ್ರವಾರವೂ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಕರೆತರಲಾಗಿತ್ತು.

ನ್ಯಾಯಾಲಯದ ಕಲಾಪ ನಡೆಯುತ್ತಿದ್ದ ವೇಳೆ ನ್ಯಾಯಾಲಯದ ಹೊರಗಡೆ ಸಮ್ಮು ತನ್ನ ಸಹಚರನ ಮೊಬೈಲ್‌ನಿಂದ ಮಾತನಾಡುತ್ತಿದ್ದ. ಇದನ್ನು ಗಮನಿಸಿದ ಪೊಲೀಸರು ಮಾತನಾಡುವುದನ್ನು ನಿಲ್ಲಿಸುವಂತೆ ಸೂಚಿಸಿದರು. ಹಿಗೆ ಹಲವು ಬಾರಿ ಹೇಳಿದರೂ ಸಹ ಸಮ್ಮು ಫೋನ್‌ನಲ್ಲಿ ಮಾತನಾಡುವುದನ್ನು ಮುಂದುವರೆಸಿದ್ದ. ಆಗ ಏರುಧನಿಯಲ್ಲಿ ಪೊಲೀಸರು ಗದರಿದ್ದಾರೆ.

ಇದರಿಂದ ಆಕ್ರೋಶಗೊಂಡ ಸಮ್ಮು ಕೈ ಕೋಳ ಹಾಕಿದ್ದ ಕೈಯಿಂದಲೇ ನ್ಯಾಯಾಲದ ಕೊಠಡಿಯ ಕಿಟಕಿ ಗಾಜಿಗೆ ಜೋರಾಗಿ ಹೊಡೆದಿದ್ದಾನೆ. ಕಿಟಕಿ ಗಾಜಿಗೆ ಜೋರಾಗಿ ಗುದ್ದಿದ ರಭಸಕ್ಕೆ ಚೂರು ಚೂರಾದ ಗಾಜಿನ ಚೂರುಗಳು ಕೋರ್ಟ್‌ನ ಒಳಾಂಗಣ ಹಾಗೂ ಹೊರಗೂ ಚೆಲ್ಲಾಪಿಲ್ಲಿಯಾಗಿ ಬಿದ್ದು ಹೋದವು. ಅಲ್ಲದೇ ಗಾಜಿನ ತುಂಡೊಂದನ್ನು ಹಿಡಿದು ಅಕ್ಕಪಕ್ಕದಲ್ಲಿದ್ದ ಜನರ ಮೇಲೆ ಹಲ್ಲೆಗೆ ಯತ್ನಿಸಿದನು.

ಕೂಡಲೇ ಎಚ್ಚೆತ್ತ ಪೊಲೀಸರು ಆರೋಪಿಯನ್ನು ಹಿಡಿದು ಎಳೆದೊಯ್ದು ಪೊಲೀಶ್ ವ್ಯಾನ್‌ನೊಳಗೆ ಕೂರಿಸಿದರು. ಘಟನೆಯಿಂದಾಗಿ ನ್ಯಾಯಾಲಯದಲ್ಲಿ ಕೆಲ ಕಾಲ ಆತಂಕದ ವಾತಾವರಣ ಉಂಟಾಗಿತ್ತು. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಭಟಾರು ಹಾಗೂ ಬಂಧೀಖಾನೆ ಅಧೀಕ್ಷಕ ಸಿದ್ದರಾಮ್ ಬಿ. ಪಾಟೀಲ್ ಭೇಟಿ ನೀಡಿ ಪರಿಶೀಲಿಸಿದರು.

ಬಳಿಕ ಕೋರ್ಟ್ ಆವರಣದ ಹೊರಭಾಗದಲ್ಲಿ ಪೊಲೀಸ್ ವಾಹನದಲ್ಲಿ ಕುಳಿತಿದ್ದ ಆರೋಪಿ, ಪೊಲೀಸರು ಹಾಗೂ ಜೈಲು ಸಿಬ್ಬಂದಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!