ಹೊಸದಿಗಂತ ಡಿಜಿಟಲ್ ಡೆಸ್ಕ್:
ತಾಂತ್ರಿಕ ದೋಷದಿಂದ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಕರಪನಹಳ್ಳಿ ಕೆರೆಯ ಬಳಿ ತುರ್ತು ಭೂಸ್ಪರ್ಶ ಮಾಡಲಾಗಿದ್ದ ಸೇನೆಯ ಹೆಲಿಕಾಪ್ಟರ್ ರಿಪೇರಿಯಾದ ಬಳಿಕ ಸುರಕ್ಷಿತವಾಗಿ ಟೇಕಾಫ್ ಆಗಿ ಚೆನ್ನೈ ಕಡೆಗೆ ತೆರಳಿದೆ.
ಭಾನುವಾರ ಯಲಹಂಕದಿಂದ ಚೆನ್ನೈಗೆ ತೆರಳುತ್ತಿದ್ದ ವಾಯುಸೇನೆಯ ಹೆಲಿಕಾಪ್ಟರ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಬಳಿಕ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಕರಪನಹಳ್ಳಿ ಕೆರೆಯ ಬಳಿ ತುರ್ತು ಭೂಸ್ಪರ್ಶ ಮಾಡಲಾಗಿತ್ತು.
ಬಳಿಕ ಸೇನೆಯ ಮತ್ತೊಂದು ಹೆಲಿಕಾಪ್ಟರ್ ಮೂಲಕ ಟೆಕ್ನಿಕಲ್ ತಂಡ ಸ್ಥಳಕ್ಕೆ ಆಗಮಿಸಿ, ಹೆಲಿಕಾಪ್ಟರ್ನ ತಾಂತ್ರಿಕ ದೋಷ ಸರಿಪಡಿಸಿದೆ. ಭದ್ರತೆಗಾಗಿ ವಾಯುಪಡೆ ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸರನ್ನು ಸ್ಥಳಕ್ಕೆ ಕರೆಸಲಾಗಿತ್ತು.
ಹೆಲಿಕಾಪ್ಟರ್ನಲ್ಲಿ ಮೂವರು ವಾಯುಸೇನೆಯ ಪೈಲಟ್ಗಳು ತರಬೇತಿ ಪಡೆಯುತ್ತಿದ್ದರು ಎನ್ನಲಾಗಿದೆ. ಸುರಕ್ಷಿತವಾಗಿ ತುರ್ತು ಭೂಸ್ಪರ್ಶ ಮಾಡಿದ ಹಿನ್ನೆಲೆಯಲ್ಲಿ ಮೂವರು ಸೇಫ್ ಆಗಿದ್ದರು. ಇದೀಗ 18 ಗಂಟೆಗಳ ಬಳಿಕ ಹೆಲಿಕಾಪ್ಟರ್ ರಿಪೇರಿಯಾಗಿದ್ದು, ಟೇಕಾಫ್ ಆಗಿದೆ.