July 29, 2026
Wednesday, July 29, 2026
spot_img

ಗೋಕರ್ಣದ ಅಶೋಕೆಯಲ್ಲಿ ರಾಘವೇಶ್ವರ ಶ್ರೀಗಳ ‘ಅನ್ನಬ್ರಹ್ಮ ಚಾತುರ್ಮಾಸ್ಯ’ ವ್ರತದೀಕ್ಷೆ ವಿಧ್ಯುಕ್ತ ಆರಂಭ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು, ತಮ್ಮ ೩೩ನೇ ‘ಅನ್ನಬ್ರಹ್ಮ ಚಾತುರ್ಮಾಸ್ಯ’ವ್ರತವನ್ನು ಗೋಕರ್ಣದ ಅಶೋಕೆಯ ಮೂಲಮಠದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ವ್ಯಾಸಪೂಜೆ ಕೈಗೊಳ್ಳುವ ಮೂಲಕ ಬುಧವಾರ ವಿಧ್ಯುಕ್ತವಾಗಿ ಆರಂಭಿಸಿದ್ದಾರೆ.

ಆರಂಭದಲ್ಲಿ ಶ್ರೀ ದೇವರ ಪೂಜೆ ನೆರವೇರಿತು. ಬಳಿಕ ನಿಂಬೆಹಣ್ಣಿನಲ್ಲಿ ಕೃಷ್ಣಾದಿ ದೇವತೆಗಳು, ವ್ಯಾಸಾದಿ ಋಷಿಗಳನ್ನು ಆವಾಹನೆ ಮಾಡಿ, ಮಠೀಯ ಪದ್ಧತಿಯಂತೆ ಪೂಜಿಸುವುದರ ಮೂಲಕ ವ್ಯಾಸಪೂಜೆ ಸಂಪನ್ನವಾಯಿತು.

ಗುರು ಶಿಷ್ಯರ ಅನ್ಯೋನ್ಯ ಸಂಬಂಧದ ಪ್ರತೀಕ

ವ್ಯಾಸಪೂಜೆ ಬಳಿಕ, ಮಠೀಯ ಪದ್ಧತಿಯಂತೆ ‘ಗರುಡಾಸನ’ದಲ್ಲಿ ಕುಳಿತ ಶ್ರೀಗಳು, ವರ್ಷಾಕಾಲದ ನಾಲ್ಕು ಪಕ್ಷಗಳ ಕಾಲದ ಚಾತುರ್ಮಾಸ್ಯವ್ರತವನ್ನು ಕೈಗೊಳ್ಳುತ್ತಿದ್ದು, ಸಕಲ ಜೀವಿಗಳಿಗೂ ಯಾವುದೇ ತೊಂದರೆ ಇಲ್ಲದಿದ್ದರೆ, ನಾವು ಇಲ್ಲಿಯೇ ವ್ರತದೀಕ್ಷೆಯನ್ನು ಕೈಗೊಳ್ಳುತ್ತೇವೆ ಎಂದು ಹೇಳಿದರು. ಇದಕ್ಕೆ ಪ್ರತಿಸ್ಪಂದನೆಯಾಗಿ, ಸಮಸ್ತ ಶಿಷ್ಯಸ್ತೋಮದ ಒಳಿತನ್ನು ಬಯಸಿ, ಪೂಜ್ಯ ಶ್ರೀಗಳು ಚಾತುರ್ಮಾಸ್ಯವ್ರತವನ್ನು ಕೈಗೊಳ್ಳುತ್ತಿರುವುದು ನಮ್ಮೆಲ್ಲರ ಸೌಭಾಗ್ಯವೇ ಆಗಿದೆ. ನಿತ್ಯಾನುಷ್ಠಾನಗಳಿಗೆ ಯಥಾವಿಹಿತವಾದ ಸೌಕರ್ಯವನ್ನು ನಮ್ಮಿಂದ ಪೂಜ್ಯರು ಪಡೆದುಕೊಂಡು, ನಮ್ಮೆಲ್ಲರನ್ನೂ ಹರಸಬೇಕು ಎಂದು ಶಿಷ್ಯವೃಂದ ಭಿನ್ನವಿಸಿಕೊಂಡ ಮನೋಜ್ಞ ಸನ್ನಿವೇಶ ಗುರು ಶಿಷ್ಯರ ಅನ್ನೋ ಸಂಬಂಧದ ದ್ಯೋತಕವಾಯಿತು.

ಮುಗಳಿ ತಿರುಮಲೇಶ್ವರ ಭಟ್ ಸರ್ವಸೇವೆ ಸಮರ್ಪಿಸಿದರೆ, ಮಂಜುನಾಥ ಸುವರ್ಣಗದ್ದೆ ದಂಪತಿ ಸಭಾಪೂಜೆ ಸಲ್ಲಿಸಿದರು. ಮಾತೃ ವಿಭಾಗದ ದೇವಿಕಾ ಶಾಸ್ತ್ರಿ ಪ್ರಸ್ತಾವನೆ ಮಾಡಿದರೆ, ಜಿ.ಎಸ್. ಹೆಗಡೆ ದಂಪತಿ ದಿನ ಪ್ರಧಾನರಾಗಿ ಮೇಲುಸ್ತುವಾರಿ ಮಾಡಿದರು.

ಶಂಕರಾಚಾರ್ಯರ ಉದ್ದೇಶವೇ ಮಠದ ಉದ್ದೇಶ

ಬಳಿಕ ಮಠದ ಪರಿಸರದಲ್ಲಿ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಶಂಕರಾಚಾರ್ಯರು ಸೈನ್ಯ, ಸಂಪತ್ತು ಇಲ್ಲದೇ ದೇಶದಲ್ಲಿ ಧರ್ಮಸಂರಕ್ಷಣೆ ಕಾರ್ಯ ಮಾಡಿದರು. ದೇಶಾದ್ಯಂತ ಸಂಚರಿಸಿ ಜನರಿಗೆ ಸರಿಯಾದ ದಾರಿ ತೋರಿದರು. ನಿತ್ಯನಿರಂತರವಾಗಿ ಆ ಕಾರ್ಯ ನಡೆಯುವಂತೆ ಮಾಡಲು ದೇಶಾದ್ಯಂತ ಮಠಗಳನ್ನು ಸ್ಥಾಪಿಸಿದರು. ಶಂಕರಾಚಾರ್ಯರ ಉದ್ದೇಶವೇ ಮಠದ ಉದ್ದೇಶವೂ ಆಗಬೇಕು. ಶಂಕರರು ತೋರಿದ ದಾರಿಯಲ್ಲಿ ಧರ್ಮ ಪ್ರಸಾರವನ್ನು ಮಾಡುತ್ತಾ, ಸಮಾಜಕ್ಕೆ ಸರಿ – ತಪ್ಪುಗಳನ್ನು ಮಾರ್ಗದರ್ಶನ ಮಾಡುವುದು ಮಠದ ಕಾರ್ಯವಾಗಬೇಕು. ನಮ್ಮ ಮಠದ ಉದ್ದೇಶ ಹಾಗೂ ಈ ’ಅನ್ನಬ್ರಹ್ಮ ಚಾತುರ್ಮಾಸ್ಯ’ದ ಉದ್ದೇಶವೂ ಇದೇ ಆಗಿದೆ. ಜೀವನಕ್ಕೆ ಸರಿಯಾದ ದಾರಿಯನ್ನು ತೋರುವುದು ಹಾಗೂ ಸಮಾಜದಲ್ಲಿನ ತಪ್ಪುಗಳನ್ನು ತಿದ್ದುವುದು ಮಠದ ಕಾರ್ಯ ಎಂದು ಹೇಳಿದರು.

ಇಂದು ಗೌಣವಾದ ವಿಚಾರಗಳು ಮುಖ್ಯವಾಗುತ್ತಿದೆ. ಮುಖ್ಯ ವಿಚಾರಗಳು ಗೌಣವಾಗುತ್ತಿದೆ. ಇದು ಈ ಕಾಲದ ದುರಂತ ಎಂದ ಶ್ರೀಗಳು, ಇಂದು ನಾವು ಏನನ್ನು ತಿನ್ನುತ್ತಿದ್ದೇವೆ? ಹೇಗೆ ತಿನ್ನುತ್ತಿದ್ದೇವೇ? ಆಹಾರವನ್ನು ಹೇಗೆ ತಯಾರಿಸಲಾಗಿದೆ? ಎಂಬ ಕುರಿತು ಆಲೋಚಿಸದೇ ಕೇವಲ ತುತ್ತಿನ ಚೀಲವನ್ನು ತುಂಬಿಸುವ ಕಾರ್ಯ ಮಾಡುತ್ತಿದ್ದೇವೆ. ಇಂದು ಆಹಾರದ ಕುರಿತಾಗಿ ಸಮರ್ಪಕವಾದ ಮಾಹಿತಿಯನ್ನು ಶಾಲೆಯಲ್ಲಗಲಿ, ವಿಶ್ವವಿದ್ಯಾಲಯಗಳಾಗಲಿ ತಿಳಿಸಿಕೊಡುತ್ತಿಲ್ಲ. ನಾವು ಏನನ್ನು ತಿನ್ನುತ್ತೇವೋ ಅದೇ ನಾವಾಗುತ್ತೇವೆ. ಹಾಗಾಗಿ ನಾವೇ ಆಹಾರದ ಕುರಿತಾದ ಸರಿ ತಪ್ಪುಗಳನ್ನು ಸಮಾಜಕ್ಕೆ ತಿಳಿಸಲು ಮುಂದಾಗಿದ್ದೇವೆ ಎಂದರು.

ಇದನ್ನೂ ಓದಿ:


ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ವಿತ್ತಾಧ್ಯಕ್ಷ ಗಣೇಶ್ ಜೆ.ಎಲ್, ಶಾಸನತಂತ್ರದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ, ಕಾರ್ಯದರ್ಶಿ ಕೆ.ಪಿ. ಎಡಪ್ಪಾಡಿ, ಹವ್ಯಕ ಮಹಾಮಂಡಲದ ಅಧ್ಯಕ್ಷ ಹರಿಪ್ರಸಾದ್ ಪೆರಿಯಾಪು, ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ಚಾತುರ್ಮಾಸ್ಯದ ಪ್ರಧಾನ ಸಂಯೋಜಕ ಚಂದನ್ ಶಾಸ್ತ್ರಿ, ಶಾಸನತಂತ್ರ ಹಾಗೂ ಎಲ್ಲಾ ಮಂಡಲಗಳ ಪದಾಧಿಕಾರಿಗಳು, ಚಾತುರ್ಮಾಸ್ಯದ ನಿರ್ವಾಹಕರು ಸೇರಿದಂತೆ ರಾಜ್ಯ ಹಾಗೂ ಹೊರ ರಾಜ್ಯಗಳ ವಿವಿಧ ಭಾಗಗಳ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ವ್ಯಾಸಮಂತ್ರಾಕ್ಷತೆ ಸ್ವೀಕರಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !