ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್ ಬಾಸ್ ಕನ್ನಡದ ಹೊಸ ಸೀಸನ್ ಯಾವಾಗ ಶುರುವಾಗಲಿದೆ ಎಂದು ಕಾದು ಕುಳಿತಿದ್ದ ವೀಕ್ಷಕರಿಗೆ ಇಂದು ಒಂದು ದೊಡ್ಡ ಸುದ್ದಿ ಸಿಕ್ಕಿದೆ. ಈ ಸೀಸನ್ ನಲ್ಲಿ ಆಂಕರ್ ಬದಲಾಗುತ್ತಾರಾ ಎಂಬ ಅನುಮಾನಕ್ಕೆ ತೆರೆ ಬಿದ್ದಿದೆ.
ಬಿಗ್ ಬಾಸ್ ಕನ್ನಡ ಸೀಸನ್ 11 ಸೆಪ್ಟೆಂಬರ್ 29 ರಂದು ಆರಂಭವಾಗಲಿದ್ದು, ಕಿಚ್ಚ ಸುದೀಪ್ ಈ ಬಾರಿಯೂ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಕಲರ್ಸ್ ಕನ್ನಡ ಟಿವಿಯಲ್ಲಿ ಹೊಸ ಪ್ರೋಮೋ ಬಿಡುಗಡೆಯಾಗಿದ್ದು, ಇದರಲ್ಲಿ ಕಿಚ್ಚ ಸುದೀಪ್ ಅವರು ಅಬ್ಬರಿಸಿದ್ದಾರೆ.
ಇಷ್ಟು ವರ್ಷಗಳ ಕಾಲ ಸುದೀಪ್ ಅವರು ಯಶಸ್ವಿಯಾಗಿ ಬಿಗ್ ಬಾಸ್ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ. ಅವರಿಂದಾಗಿ ಎಲ್ಲ 10 ಸೀಸನ್ಗಳಿಗೆ ಸ್ಟಾರ್ ಮೆರುಗು ಸಿಕ್ಕಿತು. ಈಗ ಸಡನ್ ಆಗಿ ಬೇರೆ ಆ್ಯಂಕರ್ ಬರುತ್ತಾರೆ ಎಂದರೆ ಅಭಿಮಾನಿಗಳು ಅದನ್ನು ಸ್ವೀಕರಿಸುವುದು ಕಷ್ಟ. ಹಾಗಿದ್ದರೂ ಕೂಡ ಕೆಲವು ಅನುಮಾನಗಳು ಹುಟ್ಟಿಕೊಂಡಿದ್ದವು. ಸುದೀಪ್ ಬದಲು ಬೇರೆಯವರು ಈ ಬಾರಿ ನಿರೂಪಣೆ ಮಾಡಬಹುದು ಎಂದು ಕೆಲವರು ಊಹಿಸಿದ್ದರು. ಆದರೆ ಅದು ನಿಜವಾಗಿಲ್ಲ.