ಹೊಟೇಲ್ ಶೈಲಿಯಲ್ಲೇ ಪರ್ಫೆಕ್ಟ್ ಆಗಿ, ತುಂಬಾನೇ ಸಿಂಪಲ್ ಆಗಿ ಮನೆಯಲ್ಲೇ ಪನೀರ್ ಕೋಫ್ತಾ ಹೆಂಗ್ ಮಾಡೋದು ನೋಡೋಣ.
ತುರಿದ ಪನೀರ್
ಆಲೂಗಡ್ಡೆ
ಮೈದಾ ಹಿಟ್ಟು
ಹಸಿಮೆಣಸಿನಕಾಯಿ ಹಾಗೂ ಶುಂಠಿ ಪೇಸ್ಟ್
ಜೀರಿಗೆ
ಉಪ್ಪು
ಟೊಮೆಟೊ
ಈರುಳ್ಳಿ
ಗೋಡಂಬಿ
ಹಸಿ ಶುಂಠಿ-ಬೆಳ್ಳುಳ್ಳಿ ಪೇಸ್ಟ್
ಖಾರದ ಪುಡಿ
ಧನಿಯಾ ಪುಡಿ
ಗರಂ ಮಸಾಲ
ಫ್ರೆಶ್ ಕ್ರೀಮ್
ಕಸೂರಿ ಮೇಥಿ
ಏಲಕ್ಕಿ, ಲವಂಗ, ಚಕ್ಕೆ, ಪಲಾವ್ ಎಲೆ
ಎಣ್ಣೆ
ಒಂದು ಬೌಲ್ ತಗೊಂಡು ಅದಕ್ಕೆ ತುರಿದ ಪನೀರ್, ಬೆಂದ ಆಲೂಗಡ್ಡೆ, ಮೈದಾ ಹಿಟ್ಟು, ಹಸಿಮೆಣಸಿನಕಾಯಿ-ಶುಂಠಿ ಪೇಸ್ಟ್, ಜೀರಿಗೆ ಪುಡಿ, ಖಾರದ ಪುಡಿ, ಕಟ್ ಮಾಡಿದ ಗೋಡಂಬಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಎಲ್ಲವನ್ನೂ ಚಪಾತಿ ಹಿಟ್ಟಿನ ತರ ಚೆನ್ನಾಗಿ ನಾದಿಕೊಳ್ಳಿ. ಈಗ ಇದರಿಂದ ಸಣ್ಣ ಸಣ್ಣ ಉಂಡೆಗಳನ್ನು ಮಾಡಿಟ್ಟುಕೊಳ್ಳಿ.
ಬಾಣಲೆಯಲ್ಲಿ ಎಣ್ಣೆ ಕಾಯೋಕೆ ಇಡಿ. ಎಣ್ಣೆ ಕಾದಮೇಲೆ ಮಾಡಿಟ್ಟ ಉಂಡೆಗಳನ್ನು ಒಂದೊಂದಾಗಿ ಹಾಕಿ, ಗೋಲ್ಡನ್ ಬ್ರೌನ್ ಬರೋವರೆಗೂ ಕರಿಯಿರಿ. ಇನ್ನೊಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಹೆಚ್ಚಿದ ಈರುಳ್ಳಿ, ಟೊಮೆಟೊ ಮತ್ತು ನೆನೆಸಿದ ಗೋಡಂಬಿ ಹಾಕಿ ಮೆತ್ತಗಾಗುವವರೆಗೆ ಹುರಿಯಿರಿ. ಇದು ತಣ್ಣಗಾದ ಮೇಲೆ ಮಿಕ್ಸಿ ಜಾರ್‌ಗೆ ಹಾಕಿ ಪೇಸ್ಟ್ ಮಾಡಿಕೊಳ್ಳಿ. ಈಗ ಬಾಣಲೆಗೆ ಮತ್ತೆ ಎಣ್ಣೆ ಹಾಕಿ, ಇಡೀ ಮಸಾಲೆಗಳನ್ನು (ಚಕ್ಕೆ, ಲವಂಗ, ಏಲಕ್ಕಿ, ಪಲಾವ್ ಎಲೆ) ಹಾಕಿ ಹುರಿಯಿರಿ. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವವರೆಗೆ ಕೈಯಾಡಿಸಿ. ಈಗ ಮಿಕ್ಸಿ ಮಾಡಿದ ಟೊಮೆಟೊ-ಈರುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಖಾರದ ಪುಡಿ, ಧನಿಯಾ ಪುಡಿ, ಗರಂ ಮಸಾಲ ಮತ್ತು ಉಪ್ಪು ಹಾಕಿ, ಎಣ್ಣೆ ಮೇಲ್ಗಡೆ ತೇಲಿ ಬರುವವರೆಗೂ ಸಣ್ಣ ಉರಿಯಲ್ಲಿ ಬೇಯಿಸಿ. ಗ್ರೇವಿ ಗಟ್ಟಿಯಾದರೆ ಸ್ವಲ್ಪ ಬಿಸಿ ನೀರು ಸೇರಿಸಿ.
ಗ್ರೇವಿ ಚೆನ್ನಾಗಿ ಕುದಿಬಂದ ಮೇಲೆ, ಅದಕ್ಕೆ ಫ್ರೆಶ್ ಕ್ರೀಮ್ ಮತ್ತು ಕಸೂರಿ ಮೇಥಿ ಹಾಕಿ ಮಿಕ್ಸ್ ಮಾಡಿ ಗ್ಯಾಸ್ ಆಫ್ ಮಾಡಿ. ಮೇಲೆ ಸ್ವಲ್ಪ ಕೊತ್ತಂಬರಿ ಸೊಪ್ಪು ಉದುರಿಸಿದರೆ ರೆಸ್ಟೋರೆಂಟ್ ಶೈಲಿಯ ‘ಪನೀರ್ ಕೋಫ್ತಾ’ ಸವಿಯಲು ಸಿದ್ಧ. ಇದನ್ನ ಚಪಾತಿ, ರೋಟಿ, ಅಥವಾ ರೈಸ್ ಜೊತೆ ತಿಂದ್ರೆ ಆಹಾ.. ಟೇಸ್ಟ್ ಮಾತ್ರ ಸೂಪರ್!



