ಹೊಸದಿಗಂತ ಡಿಜಿಟಲ್ ಡೆಸ್ಕ್:
ಟ್ವಿಟ್ಟರ್ ಒಡೆಯ ಎಲಾನ್ ಮಸ್ಕ್ ನಿನ್ನೆಯಷ್ಟೇ ಟ್ವಿಟ್ಟರ್ ಲೋಗೋವನ್ನು ಬದಲಾಯಿಸುವುದಾಗಿ ಹೇಳಿಕೊಂಡಿದ್ದು, ಇದೀಗ ಹಕ್ಕಿ ಇದ್ದ ಜಾಗದಲ್ಲಿ ಎಕ್ಸ್ ಚಿಹ್ನೆ ಬಂದಿದೆ.
ಟ್ವಿಟ್ಟರ್ ಕಂಪನಿಯ ಮಾಲೀಕ ಹಾಗೂ ಜಸ್ಪೇಸ್ ಎಕ್ಸ್ ಸಂಸ್ಥಾಪಕನೂ ಆದ ಎಲಾನ್ ಮಸ್ಕ್ ಶೀಘ್ರದಲ್ಲೇ ಟ್ವೀಟರ್ ಬ್ರ್ಯಾಂಡ್, ಬಳಿಕ ಹಂತಹಂತವಾಗಿ ಎಲ್ಲ ಹಕ್ಕಿಗಳಿಗೂ ವಿದಾಯ ಹೇಳುತ್ತೇವೆ ಎಂದು ಟ್ವೀಟ್ ಮಾಡಿದ್ದರು.
ಟ್ವಿಟರ್ ಮಾಲೀಕ ಎಲಾನ್ ಮಸ್ಕ್, ಸಿಇಒ ಲಿಂಡಾ ಯಕಾರಿನೋ ನೂತನ ಲೋಗೋವನ್ನು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಲೋಗೋ ಬಿಡುಗಡೆ ಸಮಾರಂಭದ ಅಂಗವಾಗಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಟ್ವಿಟರ್ ಪ್ರಧಾನ ಕಚೇರಿ ಎಲ್ಇಡಿ ಲೈಟಿಂಗ್ ಮೂಲಕ ಲೋಗೋ ಹಾಕಲಾಗಿದೆ.
ಎಲಾನ್ ಮಸ್ಕ್ ಮಾಲೀಕತ್ವ ಹೊಂದಿರುವ ಹಾಗೂ ಅತೀ ಹೆಚ್ಚಿನ ಪಾಲು ಹೊಂದಿರುವ ಬಹುತೇಕ ಕಂಪನಿಗಳ ಹೆಸರು ಅಥವಾ ಲೋಗೋದಲ್ಲಿ X ಇದೆ. ಎಲಾನ್ ಮಸ್ಕ್ ಅವರ ಬಾಹ್ಯಾಕಾಶ ಕಂಪನಿ ಹೆಸರು ಸ್ಪೇಸ್ ಎಕ್ಸ್. ಇನ್ನು ಟ್ವಿಟರ್ ಕಂಪನಿಯನ್ನು ಈಗಾಗಲೇ ಎಕ್ಸ್ ಕಾರ್ಪ್ ಅನ್ನೋ ಶೆಲ್ ಕಂಪನಿ ಜೊತೆ ಮರ್ಜ್ ಮಾಡಿದ್ದಾರೆ. ಇದೀಗ ಟ್ವಿಟರ್ ಲೋಗೋವನ್ನು ಎಕ್ಸ್ ಎಂದು ರಿ ಬ್ರ್ಯಾಂಡ್ ಮಾಡಲಾಗಿದೆ.
ಟ್ವಿಟರ್ ಈಗಾಗಲೇ ಹಲವು ಬದಲಾವಣೆ ಮಾಡಿದೆ. ಟ್ವೀಟರ್ ಬಳಕೆದಾರರಿಗೆ ದೈನಂದಿನ ವೀಕ್ಷಣೆಯ ಮಿತಿ ಹೇರಿದ್ದಾರೆ. ಬ್ಲೂಟಿಕ್ ಇಲ್ಲದ ಉಚಿತ ಖಾತೆ ಹೊಂದಿದವರು, ಹೊಸದಾಗಿ ಖಾತೆ ಹೊಂದಿದವರು ಮಾತ್ರವಲ್ಲದೇ, ಮಾಸಿಕ ಚಂದಾ ಪಾವತಿ ಮಾಡಿ ಬ್ಲೂಟಿಕ್ ಹೊಂದಿದವರಿಗೂ ದೈನಂದಿನ ಇಷ್ಟೇ ಟ್ವೀಟ್‌ಗಳನ್ನು ವೀಕ್ಷಣೆ ಮಾಡಬಹುದು ಎಂಬ ಮಿತಿ ಹೇರಿದ್ದಾರೆ.